ಕೊಲಂಬೋ: ಶ್ರೀಲಂಕಾದಲ್ಲಿ ಉಗ್ರರ ದಾಳಿ ಮತ್ತೆ ಮುಂದುವರೆದಿದೆ. ಈಶಾನ್ಯ ಶ್ರೀಲಂಕಾದಲ್ಲಿದ್ದ ಶಂಕಿತ ಇಸ್ಲಾಮಿಕ್ ಸ್ಟೇಟ್ ಉಗ್ರರ ಅಡಗುದಾಣಗಳ ಮೇಲೆ ಸೈನಿಕರು ದಾಳಿ ನಡೆಸಿದ್ದು, ಈ ವೇಳೆ ಉಗ್ರರು ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದಾರೆ.
ದಾಳಿಯಲ್ಲಿ 6 ಮಕ್ಕಳು ಸೇರಿದಂತೆ ಒಟ್ಟು 15 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಕಾಲ್ ಮುನೈ ಪ್ರಾಂತ್ಯದಲ್ಲಿ ಶ್ರೀಲಂಕಾ ಸೇನೆ ಮತ್ತು ಉಗ್ರರ ನಡುವೆ ಭೀಕರ ಗುಂಡಿನ ದಾಳಿ ನಡೆದಿದ್ದು, ಈ ವೇಳೆ ಉಗ್ರರ ಅಡಗುದಾಣದಲ್ಲಿ ಶೇಖರಿಸಿಡಲಾಗಿದ್ದ ಬಾಂಬ್ ಗಳನ್ನು ಉಗ್ರರೇ ಸ್ಫೋಟಿಸಿಕೊಂಡಿದ್ದಾರೆ. ಈ ವೇಳೆ ಮೂವರು ಶಂಕಿತ ಉಗ್ರರು ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಶ್ರೀಲಂಕಾ ಪೊಲೀಸರು, ಈಶಾನ್ಯ ಶ್ರೀಲಂಕಾದಲ್ಲಿ ಇಸ್ಲಾಮಿಕ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ಉಗ್ರರು ಅಡಗಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಈ ನಿಟ್ಟಿನಲ್ಲಿ ಸೇನಾ ಕಾರ್ಯಾಚರಣೆ ನಡೆಸಲಾಗಿತ್ತು ಎಂದಿದ್ದಾರೆ.
ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ ಶಂಕಿತ ಉಗ್ರರ ಶವಗಳನ್ನು ಶ್ರೀಲಂಕಾ ಸೇನಾಪಡೆಗಳು ವಶಕ್ಕೆ ಪಡೆದಿವೆ. ಅಂತೆಯೇ ಕಾಲ್ ಮುನೈ ಪಟ್ಟಣದ ಇನ್ನೂ ಮೂರು ಮನೆಗಳಲ್ಲಿ ಉಗ್ರರು ಅಡಗಿ ಕುಳಿತಿದ್ದು, ಶ್ರೀಲಂಕಾ ಸೇನೆ ಕಾರ್ಯಾಚರಣೆ ಮುಂದುವರೆಸಿದೆ.
6 Children Among 15 Killed In Raids On ISIS Hideout In Sri Lanka: Police