ಬೆಂಗಳೂರು: ಚಿಕ್ಕ ಪ್ರಾಯದಲ್ಲೇ ಮದುವೆಯಾಗಲು ಮನೆಯವರು ಒತ್ತಾಯಿಸಿದ್ದರಿಂದ ಬೇಸತ್ತು ಮನೆ ಬಿಟ್ಟು ಹೋದ ಹುಡುಗಿ ದ್ವಿತೀಯ ಪಿಯುಸಿಯಲ್ಲಿ ಶೇ.90 ಅಂಕಗಳನ್ನು ಪಡೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಚಿಕ್ಕ ಪ್ರಾಯದಲ್ಲೇ ಮದುವೆ ಎಂಬ ಬಂಧನದಲ್ಲಿಡದೆ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿದರೆ ಎಂತಹ ಸಾಧನೆಯನ್ನು ಬೇಕಿದ್ದರೂ ಮಾಡುತ್ತಾರೆ ಎಂಬುದನ್ನು ಪೋಷಕರ ಸಹಾಯವಿಲ್ಲದೆಯೇ ಸಾಧಿಸಿ ಸಮಾಜಕ್ಕೆ ಸಾರಿ ಹೇಳಿದ್ದಾಳೆ.
ಐಎಎಸ್ ಕನಸು ಹೊತ್ತಿರುವ ಹುಡುಗಿ ರೇಖಾ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.74 ಅಂಕಗಳನ್ನು ಗಳಿಸುವ ಮೂಲಕ ಪ್ರತಿಭಾನ್ವಿತ ಹುಡುಗಿ ಎಂಬುದನ್ನು ಸಾಭೀತು ಪಡಿಸಿದ್ದಳು. ಆದರೆ ಮನೆಯಲ್ಲಿ ನೆಂಟರೆಲ್ಲರೂ ಆಕೆಗೆ ಮದುವೆ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದರಿಂದ ಬೇಸತ್ತ ರೇಖಾ ಮನೆ ಬಿಟ್ಟು ಹೋಗಿದ್ದಳು.
ರೇಖಾ, ಚಿಕ್ಕಬಳ್ಳಾಪುರದ ಬಾಗೆಪಲ್ಲಿ ತಾಲೂಕಿನ ಕೊಟ್ಟೂರು ಗ್ರಾಮ ನಿವಾಸಿಯಾಗಿದ್ದು 2 ವರ್ಷಗಳ ಹಿಂದೆ ಮನೆ ಬಿಟ್ಟು ತೆರಳಿದ್ದಳು. ರೇಖಾಳ ತಾಯಿ ಮನೆ ಸಹಾಯಕಿಯಾಗಿ ಕೆಲಸ ಮಾಡುತ್ತಾರೆ. ಆಕೆಗೆ ಮಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಬೇಕು ಎಂಬ ಅರಿವಿಲ್ಲದ ಕಾರಣ ಇತರ ಸಂಬಂಧಿಕರು ಮದುವೆಗೆ ಒತ್ತಾಯಿಸಿದ್ದಾರೆ.
ಬಾಲ್ಯವಿವಾಹವನ್ನು ಒಪ್ಪಿಕೊಳ್ಳದ ರೇಖಾ ತನ್ನ ಸ್ನೇಹಿತೆ ಜತೆ ಉನ್ನತ ವಿದ್ಯಾಭ್ಯಾಸದ ಕನಸು ಹೊತ್ತು ಬೆಂಗಳೂರಿಗೆ ಬರುತ್ತಾಳೆ. ಸಮಯ ವ್ಯರ್ಥ ಮಾಡದೆ ಹೆಬ್ಬಾಳದಲ್ಲಿ ಕಂಪ್ಯೂಟರ್ ತರಗತಿ ಸೇರಿಕೊಳ್ಳುತ್ತಾಳೆ.
ಕೇವಲ ಕಂಪ್ಯೂಟರ್ ಕೋರ್ಸ್ನಿಂದ ತೃಪ್ತಿಗೊಳ್ಳದ ರೇಖಾ, ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ಸಹಾಯ ಕೋರುತ್ತಾಳೆ. ಶಿಕ್ಷಣ ಮುಂದುವರಿಸುವ ತನ್ನ ಇಚ್ಛೆಯನ್ನು ಹೇಳಿಕೊಳ್ಳುತ್ತಾಳೆ. ನಂತರ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಹೆಬ್ಬಾಳದಲ್ಲಿದ್ದ ರೇಖಾಳ ಪಿಜೆಗೆ ಆಗಮಿಸಿ ಆಕೆಯನ್ನು ಮತ್ತಿಕೆರೆಯ ಸ್ಪರ್ಶ ಟ್ರಸ್ಟ್ಗೆ ಸೇರಿಸುತ್ತಾರೆ. ನೆಲಮಂಗಲದ ಸರಕಾರಿ ಪದವಿ ಪೂರ್ವ ಕಾಲೇಜು ಸೇರಲು ಸಹಾಯ ಮಾಡುತ್ತಾರೆ.
ಎರಡು ವರ್ಷಗಳ ಕಷ್ಟಕ್ಕೆ ಏಪ್ರಿಲ್ 18ರಂದು ಪಿಯು ಫಲಿತಾಂಶದಲ್ಲಿ ಶೇ.90.3 ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಫಲ ಪಡೆದಿದ್ದಾಳೆ. 600 ಅಂಕಗಳಿಗೆ 542 ಅಂಕಗಳನ್ನು ಪಡೆದಿದ್ದಾಳೆ. ಇತಿಹಾಸದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾಳೆ. ಮುಂದೆ ಬಿಎ ಪದವಿ ಗಳಿಸಿ ಐಎಎಸ್ ಮಾಡಬೇಕು ಎಂಬ ಗುರಿ ಹೊಂದಿದ್ದಾಳೆ.
ರೇಖಾಳ ಸಾಧನೆ ಬಗ್ಗೆ ನಮಗೆ ಹೆಮ್ಮೆಯಿದೆ. ರೇಖಾ ದೃಢ ಸಂಕಲ್ಪ ಹೊಂದಿರುವ ಹುಡುಗಿ ಎಂದು ಸ್ಪರ್ಶ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟೀ ಆರ್ ಗೋಪಿನಾಥ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
ನಾನು ಚಿಕ್ಕವಳಿದ್ದಾಗ ತಂದೆಯನ್ನು ಕಳೆದುಕೊಂಡೆ. ಶಿಕ್ಷಣ ಮುಂದುವರಿಸಲು ಬಿಡದೆ ಬಾಲ್ಯವಿವಾಹ ಮಾಡಿಸುತ್ತಾರೆ ಎಂಬ ಕಾರಣಕ್ಕೆ ಮನೆ ಬಿಟ್ಟು ಬಂದೆ. ನನಗೆ ಈಗ ನನ್ನ ಜೀವನ ಗುರಿ ಏನು ಎಂಬುದು ಸ್ಪಷ್ಟವಾಗಿದೆ. ನಾನು ಮೊದಲು ವಕೀಲೆಯಾಗಬೇಕು. ನಂತರ ನಾಗರಿಕ ಸೇವೆಗಳ ಪರೀಕ್ಷೆ ಎದುರಿಸಬೇಕು ಎಂದುಕೊಂಡಿದ್ದೇನೆ ಎಂದು ರೇಖಾ ತನ್ನ ಗುರಿಯ ಬಗ್ಗೆ ಹೆಮ್ಮೆಯಿಂದ ಹೇಳಿದಳು.