ಬೆಂಗಳೂರು,ಏ.24- ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ರಚನೆಯಾಗುವವರೆಗೂ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ದೋಸ್ತಿ ಸರ್ಕಾರವನ್ನು ಅಸ್ಥಿರಗೊಳಿಸುವ ಯಾವುದೇ ಚಟುವಟಿಕೆಗಳನ್ನು ನಡೆಸಬಾರದೆಂದು ಕೇಂದ್ರ ಬಿಜೆಪಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಕೇವಲ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ತಕ್ಷಣ ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಕನಿಷ್ಠ ಪಕ್ಷ 12ರಿಂದ 15 ಶಾಸಕರು ಹೊರಬಂದರೆ ಮಾತ್ರ ಸಮ್ಮಿಶ್ರ ಸರ್ಕಾರದ ಬುಡ ಅಲುಗಾಡುತ್ತದೆ. ಅಲ್ಲಿಯ ತನಕ ಊಹಪೋಹಗಳನ್ನೇ ನಂಬಿಕೊಂಡು ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವ ಚಟುವಟಿಕೆಗಳನ್ನು ನಡೆಸದಂತೆ ತಾಕೀತು ಮಾಡಿದೆ.
ಈ ಹಿಂದೆ ಆಪರೇಷನ್ ಕಮಲ ಆಡಿಯೋ ಪ್ರಕರಣ, ರೆಸಾರ್ಟ್ ಪ್ರವಾಸದಿಂದಾಗಿ ಪಕ್ಷಕ್ಕೆ ಭಾರೀ ಮುಜುಗರವಾಗಿದೆ. ಪುನಃ ಅಂಥದ್ದೇ ದುಸ್ಸಾಹಸಕ್ಕೆ ಕೈ ಹಾಕಬೇಡಿ. ನಾವು ಸೂಚನೆ ಕೊಡುವವರೆಗೂ ಯಾವುದೇ ರೀತಿಯ ಚಟುವಟಿಕೆಗಳು ನಡೆಸಬಾರದು. ರಾಜ್ಯಾಧ್ಯಕ್ಷರ ಅನುಮತಿ ಇಲ್ಲದೆಯೂ ಮಾತನಾಡಬಾರದೆಂದು ಸೂಚಿಸಿದ್ದಾರೆ.
ಒಂದು ವೇಳೆ ತಕ್ಷಣವೇ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆದರೆ ಮುಂದಿನ ಹಂತದ ಲೋಕಸಭೆ ಚುನಾವಣೆಯ ಮತದಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಬಿಜೆಪಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಹೊರಟಿದೆ ಎಂದು ಪ್ರತಿಪಕ್ಷದವರು ಆರೋಪಿಸುತ್ತಾರೆ.
ಹೀಗಾಗಿ ಕೇಂದ್ರದಲ್ಲಿ ನಮ್ಮ ಸರ್ಕಾರ ರಚನೆಯಾಗುವವರೆಗೂ ನೀವು ಮೌನಕ್ಕೆ ಶರಣಾಗಬೇಕೆಂದು ಖುದ್ದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರೇ ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಹಿಂದೆ ಇದೇ ರೀತಿ ಕೆಲವು ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬರುತ್ತೇವೆ ಎಂದು ಹೇಳಿ ಕೊನೆ ಕ್ಷಣದಲ್ಲಿ ಕೈ ಕೊಟ್ಟು ಪಕ್ಷಕ್ಕೆ ಮುಜುಗರ ಸೃಷ್ಟಿಸಿದರು. ಕೆಲವು ಶಾಸಕರು ಆಪರೇಷನ್ ಕಮಲದ ಹೆಸರು ಹೇಳಿಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಯಾರೊಬ್ಬರೂ ಅವಕಾಶ ಕೊಡಬಾರದೆಂದು ನಿರ್ದೇಶನ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ, ನಾಗೇಂದ್ರ, ಮಹೇಶ್ ಕುಮಟಹಳ್ಳಿ, ಕಂಪ್ಲಿ ಗಣೇಶ್ ಸೇರಿದಂತೆ ಮತ್ತಿತರರು ರಾಜೀನಾಮೆ ನೀಡುತ್ತೇನೆ ಎಂದು ಮಾಧ್ಯಮಗಳ ಮುಂದೆ ಹೇಳಿದರೂ ನಂಬಬೇಡಿ. ಅವರು ವಿಧಾನಸಭೆಯ ಸ್ಪೀಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರವನ್ನು ನೀಡುವವರೆಗೂ ತುಟಿಕ್ಪುಟಕ್ ಎನ್ನಲೂ ಬೇಡಿ.
ಉಮೇಶ್ ಜಾಧವ್ ಹೇಗೆ ಯಾರಿಗೂ ಹೇಳದೆ ಸ್ಪೀಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರೋ ಅದೇ ರೀತಿ ಇವರು ಕೂಡ ರಾಜೀನಾಮೆ ನೀಡುವವರೆಗೂ ಮಾಧ್ಯಮಗಳಿಗೆ ಹೇಳಿಕೆಯನ್ನೂ ನೀಡಬಾರದು. ನಿಮ್ಮ ಹೇಳಿಕೆಗಳೇ ಕೆಲವು ಬಾರಿ ತಿರುಗುಬಾಣವಾಗುತ್ತದೆ ಎಂದು ರಾಜ್ಯ ನಾಯಕರಿಗೆ ಸೂಚನೆ ಕೊಟ್ಟಿದ್ದಾರೆ.
ಮೊದಲು ನಿಮ್ಮಲ್ಲಿರುವ ಶಾಸಕರನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳಿ. ಕೆಲವು ಅಸಮಾಧಾನಿತರು ಕಾಂಗ್ರೆಸ್ ಜೆಡಿಎಸ್ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಇದೆ. ಒಂದಿಬ್ಬರು ಶಾಸಕರನ್ನು ಸೆಳೆದರೆ ಸರ್ಕಾರ ರಚನೆ ಮಾಡುವ ಇಡೀ ಕಾರ್ಯತಂತ್ರ ಕೈ ಕೊಡಲಿದೆ. ಮೊದಲು ನಮ್ಮ ಮನೆಯನ್ನು ಭದ್ರ ಮಾಡಿಕೊಂಡು ಬಳಿಕ ಬೇರೆ ಪಕ್ಷದ ಶಾಸಕರನ್ನು ಸೆಳೆಯುವ ಕಾರ್ಯಕ್ಕೆ ಕೈ ಹಾಕಿ ಎಂದು ಸಲಹೆ ಮಾಡಿದ್ದಾರೆ.
ನೀವು ಮಾಡುವ ಪ್ರಮಾದದಿಂದಲೇ ಸಮ್ಮಿಶ್ರ ಸರ್ಕಾರದ ಕುರ್ಚಿ ಗಟ್ಟಿಯಾಗುತ್ತಿದೆ. ಕೆಲವರು ಸುಮ್ಮನಿದ್ದಿದ್ದರೆ ಈ ವೇಳೆಗಾಗಲೇ ದೋಸ್ತಿ ಸರ್ಕಾರ ಅಸ್ಥಿರಗೊಂಡೇ ಹಲವು ದಿನಗಳಾಗುತ್ತಿದ್ದವು. ನಿಮ್ಮ ತಪ್ಪಿನಿಂದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಕುರ್ಚಿ ಭದ್ರವಾಗುತ್ತಿದೆ ಎಂದು ಪರೋಕ್ಷವಾಗಿ ರಾಜ್ಯ ಬಿಜೆಪಿ ನಾಯಕರಿಗೆ ಚಾಟಿ ಬೀಸಿದ್ದಾರೆ.
ನಮ್ಮ ಸೂಚನೆ ಇಲ್ಲದೆ ಯಾವುದೇ ರೀತಿಯ ಚಟುವಟಿಕೆಗಳನ್ನು ನಡೆಸುವ ಅಗತ್ಯವಿಲ್ಲ. ಪಕ್ಷದಲ್ಲಿ ಗೊಂದಲ ಸೃಷ್ಟಿಸಿದರೆ ಅಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಹಿಂದೆ-ಮುಂದೆ ನೋಡುವುದಿಲ್ಲ ಎಂದು ನೇರ ಮಾತುಗಳಲ್ಲೇ ಎಚ್ಚರಿಕೆ ಕೊಟ್ಟಿದ್ದಾರೆ.