ಚಾಮರಾಜನಗರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ಗೆ ಕೈ ಕೊಟ್ಟಿತ್ತಾ ಎಂಬ ಪ್ರಶ್ನೆಯೊಂದು ಜಿಲ್ಲೆಯ ಜನರಲ್ಲಿ ಮೂಡಿದೆ. ಯಾಕಂದ್ರೆ ದೋಸ್ತಿ ಅಭ್ಯರ್ಥಿಯನ್ನು ಕೆಡವಲು ದೋಸ್ತಿಗಳೇ ಪ್ಲಾನ್ ಮಾಡಿಕೊಂಡ್ರಾ ಎಂಬ ಮಾತುಗಳು ಕೇಳಿಬರುತ್ತಿವೆ.
ಹೌದು. ಜೆಡಿಎಸ್ ಮುಖಂಡ ಮಂಜುನಾಥ್ ಅವರು ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಕರೆ ನೀಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ಗೆ ವೋಟ್ ಹಾಕಬೇಡಿ, ಬಿಜೆಪಿಗೆ ವೋಟ್ ಹಾಕಿ ಎಂದು ಹೇಳುವ ಮೂಲಕ ಮಂಜುನಾಥ್ ಅವರು ಕಾಂಗ್ರೆಸ್ ಸೋಲಿಸಲು ಹಣ ಹಂಚಿದ್ದಾರೆ ಎಂದು ಆರೋಪಿಸಲಾಗಿದೆ.
ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ ವಿರುದ್ಧ ಮತ ಹಾಕುವಂತೆ ಹೇಳಿ ಮಂಜುನಾಥ್ ಅವರು ಪ್ರತಿ ಬೂತ್ಗೆ 35 ಸಾವಿರ ರೂಪಾಯಿ ಹಂಚಿದ್ದಾರೆ. ಮುಖಂಡನ ಮಾತು ಕೇಳಿ ಜನರು ಕೂಡ ಬಿಜೆಪಿಗೆ ಮತ ಹಾಕಿದ್ದಾರೆ. ಹೀಗಾಗಿ ಚಾಮರಾಜನಗರದ ಕಾಂಗ್ರೆಸ್ ಆರ್.ಧ್ರುವನಾರಾಯಣ್ಗೆ ಸಂಕಷ್ಟ ಎದುರಾಗಿದೆ ಎಂದು ಹೇಳಲಾಗುತ್ತಿದೆ.
ತಮ್ಮ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಮಂಜುನಾಥ್, ನನ್ನ ಮೇಲೆ ಸುಳ್ಳು ಆರೋಪ ಕೇಳಿಬರುತ್ತದೆ. ಈ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದು ಹೇಳಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಜುನಾಥ್ ಅವರು ಹನೂರು ಅಸೆಂಬ್ಲಿಯಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ ಸೋತಿದ್ದರು.