ಮೇ 23ರ ಬಳಿಕ ರಾಜ್ಯ ಸರ್ಕಾರದ ಪತನ ಖಚಿತ-ಮಾಜಿ ಸಿ.ಎಂ.ಯಡಿಯೂರಪ್ಪ

ಬೆಂಗಳೂರು,ಏ.23-ಲೋಕಸಭಾ ಚುನಾವಣೆ ಫಲಿತಾಂಶದ ದಿನವಾದ ಮೇ 23ರ ಬಳಿಕ ರಾಜ್ಯ ಸರ್ಕಾರ ಪತನವಾಗುವುದು ಖಚಿತ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತಮ್ಮ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಬೆಳಗ್ಗೆ ಕುಟುಂಬ ಸಮೇತ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 23ರ ಫಲಿತಾಂಶದ ನಂತರ ದೋಸ್ತಿ ಸರ್ಕಾರ ಅಸ್ಥಿರಗೊಳ್ಳುವುದು 100ಕ್ಕೆ ನೂರರಷ್ಟು ಖಚಿತ. ಅದಕ್ಕೂ ಮುನ್ನವೇ ಸರ್ಕಾರ ಪತನಗೊಂಡರೂ ಅಚ್ಚರಿ ಪಡಬೇಕಿಲ್ಲಎಂದರು.

ನಾವು ಯಾವುದೇ ಆಪರೇಷನ್ ಕಮಲ ನಡೆಸಬೇಕಾದ ಅಗತ್ಯವಿಲ್ಲ. ಕಾಂಗ್ರೆಸ್ ಸುಮಾರು 20ಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಾಯಕತ್ವವನ್ನು ಒಪ್ಪಿಕೊಳ್ಳುತ್ತಿಲ್ಲ. ಸರ್ಕಾರದಲ್ಲಿ ಅಪ್ಪ-ಮಕ್ಕಳ ಹಸ್ತಕ್ಷೇಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮಾನಸಿಕ ಕಿರುಕುಳದಿಂದ ಹೊರಬರಲು ಶಾಸಕರು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಹೇಳಿದರು.

ಫಲಿತಾಂಶ ಪ್ರಕಟಗೊಂಡ ಬಳಿಕ ಎರಡು ಪಕ್ಷಗಳಲ್ಲಿ ಆತಂರಿಕ ಕಚ್ಚಾಟ ತಾರಕಕ್ಕೇರಲಿದೆ. ದೋಸ್ತಿ ಸರ್ಕಾರ ಈ ಬಾರಿ ಎರಡಂಕಿಯನ್ನೂ ದಾಟುವುದಿಲ್ಲ. ಕೆಲ ದಿನಗಳ ಮಟ್ಟಿಗೆ ನೀವೆ ಕಾದು ನೋಡಿ. ನಾನು ಹೆಚ್ಚು ಏನೂ ಹೇಳಲು ಸಾಧ್ಯವಿಲ್ಲ ಎಂದರು.

ಈ ಬಾರಿಯ ಚುನಾವಣೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಸೋಲುವುದು ಖಚಿತ. ಅಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಉಮೇಶ್ ಜಾಧವ್ ಗೆಲ್ಲುವುದು ಸೂರ್ಯ-ಚಂದ್ರಷ್ಟೇ ಖಚಿತ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ಈ ಬಾರಿ ಬಿ.ವೈ.ರಾಘವೇಂದ್ರ ದಾಖಲೆಯ ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಕಾಂಗ್ರೆಸ್-ಜೆಡಿಎಸ್ ನಾಯಕರು ಎಷ್ಟೇ ಹಣ, ಹೆಂಡ ಹಂಚಿದರೂ ಮತದಾರ ಪ್ರಬುದ್ಧನಾಗಿರುವುದರಿಂದ ಇಂತಹ ಗಿಮ್ಮಿಕಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

ಸಮ್ಮಿಶ್ರ ಸರ್ಕಾರ ಶಿವಮೊಗ್ಗದಲ್ಲಿ ನೂರಾರು ಕೋಟಿ ಖರ್ಚು ಮಾಡಿ ಗೆಲ್ಲಲು ಹೊರಟಿದೆ. ಆದರೂ ಜಿಲ್ಲೆಯ ಜನ ಬಿಜೆಪಿಯನ್ನು ಮತ್ತೊಮ್ಮೆ ಗೆಲ್ಲಿಸುತ್ತಾರೆ.

ನಾವು ಈ ಬಾರಿ 22ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ