ಬೆಳಗಾವಿ: ಹೈ ವೋಲ್ಟೇಜ್ ಕ್ಷೇತ್ರ ಬೆಳಗಾವಿಯಲ್ಲಿ ಮತ್ತೆ ಜಾರಕಿಹೊಳಿ ಸಹೋದರರ ಫೈಟ್ ಶುರುವಾಗಿದೆ. ಗೋಕಾಕ್ ಮಾಜಿ ಶಾಸಕ ರಮೇಶ್ ಜಾರಕಿಹೊಳಿ ತನ್ನ ಸಹೋದರ ಸತೀಶ್ ಜಾರಕಿಹೊಳಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಕಾಂಗ್ರೆಸ್ ನಾಯಕರ ವಿರುದ್ದವೂ ಬಹಿರಂಗವಾಗಿ ಮತ್ತೊಮ್ಮೆ ಅಸಮಾಧಾನ ಹೊರಹಾಕಿದ್ದಾರೆ. ಇಷ್ಟೇ ಅಲ್ಲದೇ, ರಮೇಶ್ ಜಾರಕಿಹೊಳಿ ಕಾಂಗ್ರೆಸ್ಗೆ ರಾಜೀನಾಮೆ ನೀಡುವುದಾಗಿ ತಿಳಿಸಿ ಮೈತ್ರಿ ಸರ್ಕಾರಕ್ಕೆ ಶಾಕ್ ಕೊಟ್ಟಿದ್ದಾರೆ.
ಇಂದು ಬೆಳಗಾವಿಯಲ್ಲಿ ಮತ ಚಲಾಯಿಸಿದ ಬಳಿಕ ಮಾತನಾಡಿದ ರಮೇಶ್ ಜಾರಕಿಹೊಳಿ, ತಮ್ಮ ಸಹೋದರ ‘ಸತೀಶ್ ಜಾರಕಿಹೊಳಿಗೆ ತಲೆ ಕೆಟ್ಟಿದೆ’ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ ಅವರು, ಚುನಾವಣೆ ಬಳಿಕ ರಾಜೀನಾಮೆ ಕೊಡುವುದು ಖಚಿತ ಎಂದರು. ಕಾಂಗ್ರೆಸ್ಗೆ ರಾಜೀನಾಮೆ ನೀಡುವುದು ಪಕ್ಕಾ. ಶೀಘ್ರದಲ್ಲೇ ರಾಜೀನಾಮೆ ದಿನಾಂಕ ತಿಳಿಸುತ್ತೇನೆ ಎಂದು ಹೇಳಿದರು.
“ನಾನು ರಾಜೀನಾಮೆ ನೀಡುವುದು ಪಕ್ಕಾ. ಯಾವಾಗ ಅಂತ ಇನ್ನೂ ನಿರ್ಧಾರ ಮಾಡಿಲ್ಲ. ಆ ನಂತರ ಬೇರೆ ಪಕ್ಷಕ್ಕೆ ಹೋಗುತ್ತೇನೆ. ಈವರೆಗೆ ಕಾಂಗ್ರೆಸ್ ನಾಯಕರು ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ. ಕೇವಲ ತಾಂತ್ರಿಕವಾಗಿ ಅಷ್ಟೇ ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ,” ಎಂದರು.
‘ಲಖನ್ ಜಾರಕಿಹೊಳಿ ಶಾಸಕರಾದರೆ ನನ್ನಷ್ಟು ಸಂತೋಷ ಪಡುವವರು ಯಾರೂ ಇಲ್ಲ. ಅವರಿಗಾಗಿ ನಾನು ಯಾವ ತ್ಯಾಗಕ್ಕೂ ಸಿದ್ದ. ಲಖನ್ ಜಾರಕಿಹೊಳಿ ಗೋಕಾಕ್ ನಲ್ಲಿ ಸ್ಪರ್ಧೆ ಮಾಡಿದರೆ, ನನಗೆ ಬೇರೆ ಕ್ಷೇತ್ರಗಳಿವೆ. ನಾನು ಯಾರ ಬಗ್ಗೆ ಟೀಕೆ ಮಾಡಲ್ಲ. ಲಖನ್ ಜಾರಕಿಹೊಳಿ ಶಾಸಕರಾದರೆ ಸಂತಸ ಪಡುವ ಮೊದಲನೇ ವ್ಯಕ್ತಿ ನಾನೇ. ಲಖನ್ ಶಾಸಕರಾಗಲು ಏನು ತ್ಯಾಗ ಮಾಡಲು ಸಿದ್ಧವಿದ್ದೇನೆ ಎಂದರು.
1999 ರಲ್ಲಿ ಎಸ್.ಎಂ.ಕೃಷ್ಣ ಮಾಡಿದ ತಪ್ಪಿನಿಂದಾಗಿ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಜಗಳಗಳು ಶುರುವಾದವು. ಕಾಂಗ್ರೆಸ್ ಐತಿಹಾಸಿಕ ಪಕ್ಷ. ಗುಂಪುಗಾರಿಕೆ, ಜಾತಿ ಇರಲಿಲ್ಲ. 1999 ರ ಬಳಿಕ ಪಕ್ಷದಲ್ಲಿ ಬಹಳ ಆಂತರಿಕ ಗೊಂದಲ, ಗಲಾಟೆಗಳು ಜಾಸ್ತಿಯಾಗಿದ್ದು, ಇದೀಗ ತಾರಕಕ್ಕೇರಿದೆ ಎಂದು ಹೇಳಿದರು.
ನಾನು ಕಾಂಗ್ರೆಸ್ನಲ್ಲೇ ಇರ್ತೇನೆ; ಲಖನ್ ಜಾರಕಿಹೊಳಿ
ಇನ್ನೂ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ, ನಾನು ಕಾಂಗ್ರೆಸ್ನಲ್ಲೇ ಇರುತ್ತೇನೆ ಎಂದಿದ್ದಾರೆ. ಸದ್ಯ ಲೋಕಸಭೆ ಚುನಾವಣೆ ಬಗ್ಗೆ ಗಮನ ಹರಿಸಿದ್ದೇವೆ. ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡುತ್ತಿದ್ದೇನೆ. ಎಲ್ಲಾ ಸಹೋದರರು ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಗ್ಗೆ ಏನು ಹೇಳಲ್ಲ. ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸುವುದು ನಮ್ಮ ಗುರಿ. ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ. ಅವರು ಬೇರೆ ಪಕ್ಷಕ್ಕೆ ಹೋಗಿ ಬಂದಿದ್ದಾರೆ. ನಾನು ಎಲ್ಲೂ ಹೋಗಿ ಹಾಳಾಗಿಲ್ಲ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ದುಡಿಯುತ್ತೇನೆ. ನಮ್ಮ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಎಂದು ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಬಿಜೆಪಿ ಬೆಂಬಲಿಸುವ ವಿಚಾರವಾಗಿ ಮಾತನಾಡಿದ ಅವರು, ಗೋಕಾಕ್ ಕಾಂಗ್ರೆಸ್ ಭದ್ರಕೋಟೆಯಾಗಿದೆ. ರಮೇಶ ಜಾರಕಿಹೊಳಿ ಕಾಂಗ್ರೆಸ್ ಪರ ನಿರ್ಧಾರ ಕೈಗೊಂಡರೆ ಅಷ್ಟೇ ಬೆಂಬಲ ನೀಡುತ್ತೇನೆ ಎಂದಿದ್ದಾರೆ.