ಬೆಂಗಳೂರು, ಮಾ.22-ರಾಜ್ಯ ರಾಜಕಾರಣದ ಶಕ್ತಿ ಕೇಂದ್ರ ಶಿವಮೊಗ್ಗದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಗಮಿಸುವ ವೇಳೆ ಯಾವುದೇ ಭಿನ್ನಮತಕ್ಕೆ ಅವಕಾಶವಿಲ್ಲದಂತೆ ರಣತಂತ್ರ ಹೆಣೆಯಲಾಗಿದೆ.
ಅಮಿತ್ ಷಾ ಆಗಮಿಸುವ ವೇಳೆ ಟಿಕೆಟ್ ಆಕಾಂಕ್ಷಿಗಳಾದ ಈಶ್ವರಪ್ಪ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಗೌಡ ಅವರು ತಮ್ಮ ತಮ್ಮ ಬೆಂಬಲಿಗರ ಮೂಲಕ ಬಲಾಬಲ ಪ್ರದರ್ಶಿಸದೆ ಒಗ್ಗಟ್ಟಿನಿಂದ ಇರಬೇಕೆಂದು ಪಕ್ಷದ ವರಿಷ್ಠರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷರು ಆಗಮಿಸಿದ ವೇಳೆ ಎರಡು ಬಣದವರು ತಮ್ಮ ತಮ್ಮ ಬೆಂಬಲಿಗರ ಮೂಲಕ ಶಕ್ತಿ ಪ್ರದರ್ಶಿಸಿದರೆ ಪಕ್ಷದ ಕಾರ್ಯಕರ್ತರಿಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ.
ಯಾರಿಗೆ ಟಿಕೆಟ್ ಎಂಬುದನ್ನು ವರಿಷ್ಠರು ತೀರ್ಮಾನಿಸಿದ್ದಾರೆ. ವೈಯಕ್ತಿಕ ಪ್ರತಿಷ್ಠೆಗಳನ್ನು ಬದಿಗಿಟ್ಟು ಅಧ್ಯಕ್ಷರು ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಎಲ್ಲರೂ ಒಂದಾಗಿದ್ದೇವೆ ಎಂಬ ಸಂದೇಶವನ್ನು ರವಾನಿಸುವಂತೆ ರಾಜ್ಯ ಬಿಜೆಪಿ ನಾಯಕರು ಸೂಚಿಸಿದ್ದಾರೆ.
ಇಂಥವರಿಗೆ ಟಿಕೆಟ್ ನೀಡಬೇಕೆಂದು ನೀವು ರಾಷ್ಟ್ರಾಧ್ಯಕ್ಷರ ಮುಂದೆ ಬಲಾಬಲ ಪ್ರದರ್ಶಿಸಿದರೆ ರಾಜ್ಯಕ್ಕೆ ಕೆಟ್ಟ ಸಂದೇಶ ಹೋಗುವುದಲ್ಲದೆ ಕಾರ್ಯಕರ್ತರು ಕೂಡ ಬೇಸರಪಟ್ಟುಕೊಳ್ಳುತ್ತಾರೆ. ಇದರಿಂದ ವಿರೋಧ ಪಕ್ಷಗಳನ್ನು ನಮ್ಮ ಟೀಕೆ ಮಾಡಲು ನಾವೇ ಅಸ್ತ್ರವನ್ನು ಒದಗಿಸಿಕೊಟ್ಟಂತಾಗುತ್ತದೆ. ಹಾಗಾಗಿ ಯಾರೊಬ್ಬರೂ ಪ್ರತಿಷ್ಠೆಗೆ ಇಳಿಯಬಾರದೆಂದು ಸಲಹೆ ಮಾಡಲಾಗಿದೆ.
ರಾಜ್ಯ ನಾಯಕರ ಸೂಚನೆಯಂತೆ ಈಶ್ವರಪ್ಪ ಹಾಗೂ ರುದ್ರೇಗೌಡ ಬಣ ತಮ್ಮ ತಮ್ಮ ಪ್ರತಿಷ್ಠೆಯನ್ನು ಬದಿಗೊತ್ತಿ ಅಮಿತ್ ಷಾ ಮುಂದೆ ಒಗ್ಗಟ್ಟು ಪ್ರದರ್ಶನಕ್ಕೆ ತೀರ್ಮಾನಿಸಿದ್ದಾರೆ.
ಇದೇ 26ರಂದು ಅಮಿತ್ ಷಾ ಅವರು ರಾಜ್ಯ ಬಿಜೆಪಿ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ತವರು ಜಿಲ್ಲೆ ಶಿವಮೊಗ್ಗಕ್ಕೆ ಆಗಮಿಸಲಿದ್ದು, ಅಂದು ಮಧ್ಯಾಹ್ನ ರಾಷ್ಟ್ರಕವಿ ಕುವೆಂಪು ಅವರ ಹುಟ್ಟೂರು ತೀರ್ಥಹಳ್ಳಿಯ ಕುಪ್ಪಳಿಯಲ್ಲಿರುವ ಕವಿಶೈಲಕ್ಕೆ ಭೇಟಿ ನೀಡಿ ಅಲ್ಲಿ 30 ನಿಮಿಷಗಳ ಕಾಲ ಸಮಯ ಕಳೆದು ಬಳಿಕ ತೀರ್ಥಹಳ್ಳಿಯಲ್ಲಿ ನಡೆಯುವ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಂತರ ಶಿವಮೊಗ್ಗಕ್ಕೆ ತೆರಳಿ ಬೆಕ್ಕಿನ ಕಲ್ಮಟಕ್ಕೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ಸಂಜೆ ಈಶ್ವರಪ್ಪನವರ ನಿವಾಸದಲ್ಲಿ ಊಟ ಮಾಡಿ ಖಾಸಗಿ ಹೋಟೆಲ್ನಲ್ಲಿ ತಂಗಲಿದ್ದಾರೆ.
ಇದಕ್ಕೂ ಮುನ್ನ ಅಮಿತ್ ಷಾ ಅವರು ಅಂದು ಬೆಳಗ್ಗೆ ನವದೆಹಲಿಯಿಂದ ಬೆಂಗಳೂರಿಗೆ ಆಗಮಿಸಿ ನೇರವಾಗಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ತೆರಳಿ ಶ್ರೀ ಡಾ. ಶಿವಕುಮಾರ್ ಸ್ವಾಮೀಜಿಗಳ ಆಶೀರ್ವಾದ ಪಡೆಯುವರು.
ಶಿವಮೊಗ್ಗ ಕಾರ್ಯಕ್ರಮದ ನಂತರ ದಾವಣಗೆರೆ ತೆರಳಿ ಸಿರಿಗೇರಿ ಹಾಗೂ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳನ್ನು ಭೇಟಿ ಮಾಡಲಿದ್ದಾರೆ. ಮಾದಾರ ಮಠಕ್ಕೂ ಅಮಿತ್ ಷಾ ಭೇಟಿ ನೀಡಲಿದ್ದಾರೆ.
ಅಮಿತ್ ಷಾ ಅವರ ರಾಜ್ಯ ಭೇಟಿ ಬಿಜೆಪಿ ಪಾಳೆಯದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ.