ರಾಜ್ಯಸಭೆ ಚುನಾವಣೆ ಹಿನ್ನಲೆ: ಬಿಜೆಪಿ ಶಾಸಕಾಂಗ ಸಭೆ

ಬೆಂಗಳೂರು, ಮಾ.22-ರಾಜ್ಯಸಭೆ ಚುನಾವಣೆ ನಾಳೆ ನಡೆಯುತ್ತಿರುವ ಬೆನ್ನಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಸಂಜೆ ಭಾರತೀಯ ಜನತಾಪ್ಕಷದ ಮಹತ್ವದ ಶಾಸಕಾಂಗ ಸಭೆ ಕರೆಯಲಾಗಿದೆ.

 

ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆಯಲಿರುವ ಶಾಸಕಾಂಗ ಸಭೆಗೆ ಪಕ್ಷದ ಎಲ್ಲ ಶಾಸಕರು ಹಾಗೂ ಇತ್ತೀಚೆಗೆ ಅನ್ಯಪಕ್ಷಗಳಿಂದ ಸೇರ್ಪಡೆಯಾಗಿರುವ ಶಾಸಕರು ಕೂಡ ಪಾಲ್ಗೊಳ್ಳುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ.

ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಉಪನಾಯಕ ಆರ್.ಅಶೋಕ್ ಹಾಗೂ ಪಕ್ಷದ ಕೆಲ ಮುಖಂಡರು ಭಾಗವಹಿಸಲಿದ್ದಾರೆ. ನಾಳೆ ರಾಜ್ಯಸಭೆ ಚುನಾವಣೆ ನಡೆಯಲಿದ್ದು, ಪಕ್ಷದ ವತಿಯಿಂದ ಉದ್ಯಮಿ ರಾಜೀವ್ ಚಂದ್ರಶೇಖರ್ ಕಣಕ್ಕಿಳಿಯಲಿದ್ದಾರೆ.

ವಿಧಾನಸಭೆಯಲ್ಲಿ ಬಿಜೆಪಿ ಹೊಂದಿರುವ ಬಲಾಬಲದ ಪ್ರಕಾರ ಪಕ್ಷದ ಅಧಿಕೃತ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ನಿರಾಯಾಸವಾಗಿ ಗೆಲ್ಲಲಿದ್ದಾರೆ. ಬಿಜೆಪಿ ಒಟ್ಟು 44 ಶಾಸಕರನ್ನು ಹೊಂದಿರುವ ಜೊತೆಗೆ ಬಿಎಸ್‍ಆರ್‍ನ ಪಿ.ರಾಜೀವ್, ಕಾಂಗ್ರೆಸ್‍ನ ಸಿ.ಪಿ.ಯೋಗೇಶ್ವರ್ ಹಾಗೂ ನಿನ್ನೆಯಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದ ಎ.ಎಸ್.ಪಾಟೀಲ್ ನಡಹಳ್ಳಿ ಅವರಿಂದ ಒಟ್ಟು 47 ಮತಗಳನ್ನು ಹೊಂದಿದೆ.

ರಾಜ್ಯಸಭೆ ಚುನಾವಣೆಗೆ ಆಯ್ಕೆಯಾಗಬೇಕಾದರೆ ಕಣದಲ್ಲಿರುವ ಅಭ್ಯರ್ಥಿ ಶೇ. 44.50ರಷ್ಟು ಮತ ಪಡೆಯಬೇಕು. 47 ಮತಗಳಿರುವುದರಿಂದ ರಾಜೀವ್ ಚಂದ್ರಶೇಖರ್‍ಗೆ 45 ಮತಗಳನ್ನು ಹಾಕಿದರೆ ಉಳಿದಿರುವ ಎರಡು ಮತಗಳನ್ನು ಯಾರಿಗೆ ಹಾಕಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ.

ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಿ.ಎನ್.ಫಾರೂಕ್‍ಗೆ ಹಾಕಬೇಕೆ ಇಲ್ಲವೇ ತನ್ನ ಅಭ್ಯರ್ಥಿಗೆ ಹಾಕಬೇಕೇ ಎಂಬುದರ ಬಗ್ಗೆ ಶಾಸಕರು ಚರ್ಚೆ ಮಾಡಲಿದ್ದಾರೆ.

ಮೂಲಗಳ ಪ್ರಕಾರ ರಾಜೀವ್ ಚಂದ್ರಶೇಖರ್‍ಗೆ ಮತ ಹಾಕಲು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಹೊರ ರಾಜ್ಯದವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದರೆ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಸ್ಥಳೀಯರ ವಿರೋಧಕ್ಕೆ ಗುರಿಯಾಗಬಹುದೆಂಬ ಆತಂಕ ಕಾಡುತ್ತಿದೆ. ಇದನ್ನು ದೂರ ಮಾಡಲು ಮುಂದಾಗಿರುವ ಬಿಜೆಪಿ ರಾಜೀವ್‍ಚಂದ್ರಶೇಖರ್ ಸ್ಥಳೀಯರಾಗಿದ್ದಾರೆ ಎಂಬುದನ್ನು ಬಿಂಬಿಸಲು ಮುಂದಾಗಿದೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅಡ್ಡ ಮತದಾನ ನಡೆದರೆ ಪಕ್ಷಕ್ಕೆ ಭಾರೀ ಮುಜುಗರ ಉಂಟಾಗಬಹುದೆಂಬ ಭೀತಿಯಿಂದ ಬಿಜೆಪಿ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ತಂತ್ರಕ್ಕೆ ಮೊರೆ ಹೋಗಿದೆ.

ಅಪ್ಪಿತಪ್ಪಿ ಒಂದೆರಡು ಮತಗಳು ಆಚೀಚೆ ವರ್ಗಾವಣೆಯಾದರೆ ರಾಜೀವ್ ಚಂದ್ರಶೇಖರ್‍ಗೆ ಸೋಲು ಕಟ್ಟಿಟ್ಟ ಬುತ್ತಿ. ಇದನ್ನು ತಪ್ಪಿಸುವ ಉದ್ದೇಶದಿಂದ ಪಕ್ಷ ರಕ್ಷಣಾತ್ಮಕ ತಂತ್ರವನ್ನು ಸರಿಸಿದೆ.

ಏಜೆಂಟರ ನೇಮಕ ಮತದಾನಕ್ಕೂ ಮುನ್ನ ಪ್ರತಿಯೊಬ್ಬ ಶಾಸಕರು ಏಜೆಂಟರಿಗೆ ಕಡ್ಡಾಯವಾಗಿ ತೋರಿಸಿ ಮತ ಚಲಾಯಿಸಬೇಕೆಂಬ ಸಲಹೆಯನ್ನು ಪಕ್ಷದ ಮುಖಂಡರು ಸಭೆಯಲ್ಲಿ ನೀಡಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ