![bsy_mike](http://kannada.vartamitra.com/wp-content/uploads/2018/03/bsy_mike-640x381.jpg)
ಬೆಂಗಳೂರು, ಮಾ.22- ಜಲಸಂಪನ್ಮೂಲ ಇಲಾಖೆ ಅಧೀನದಲ್ಲಿರುವ ವಿಶ್ವೇಶ್ವರಯ್ಯ ಜಲನಿಗಮ ವ್ಯಾಪ್ತಿಯ ಭದ್ರಾಮೇಲ್ದಂಡೆ ಯೋಜನೆ ಗುತ್ತಿಗೆ ಕಾಮಗಾರಿಯನ್ನು ನಕಲಿ ಕಂಪೆನಿಗಳಿಗೆ ನೀಡಿ ನೂರಾರು ಕೋಟಿ ಭ್ರಷ್ಟಾಚಾರ ನಡೆಸಿರುವ ಹಗರಣವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ದಾಖಲೆಗಳ ಸಮೇತ ಬಹಿರಂಗಪಡಿಸಿದ್ದಾರೆ.
ವಿಶ್ವೇಶ್ವರಯ್ಯ ಜಲನಿಗಮವು ಚಿತ್ರದುರ್ಗ ಶಾಖಾ ನಾಲೆಯಲ್ಲಿ ಒಟ್ಟು 2.9ಕಿ.ಮೀ. ಉದ್ದದ ನಾಲೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿತ್ತು. ಒಟ್ಟು 157,94,46,180 ಮೊತ್ತದ ಕಾಮಗಾರಿಯನ್ನು ನಿರ್ವಹಿಸಲು ನಕಲಿ ಕಾರ್ಯಾದೇಶಪತ್ರ (ವರ್ಕ್‍ಆರ್ಡರ್)ವನ್ನು ನಕಲಿಯಾಗಿ ಸೃಷ್ಟಿಸಲಾಗಿದೆ ಎಂದು ಯಡಿಯೂರಪ್ಪ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ನಾಲೆ ನಿರ್ಮಾಣ ಮಾಡಲು ಕೇವಲ ಟೆಂಡರ್ ಪ್ರಕ್ರಿಯೆಯಲ್ಲಿ ಎರಡು ಕಂಪೆನಿಗಳು ಮಾತ್ರ ಭಾಗವಹಿಸಿದ್ದವು. ನ್ಯಾಷನಲ್ ಪ್ರಾಜೆಕ್ಟ್ ಕನ್‍ಸ್ಟ್ರಕ್ಷನ್ ಕಾಪೆರ್Çರೇಷನ್ ಲಿಮಿಟೆಡ್ ಮತ್ತು ಅಮ್ಮ ಕನ್‍ಸ್ಟ್ರಕ್ಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಗಳಿಗೆ ಮಾತ್ರ ಕಾಮಗಾರಿ ನಡೆಸಲು ಕಾರ್ಯಾದೇಶ ಪತ್ರ ನೀಡಲಾಗಿದೆ.
ಕರ್ನಾಟಕದಲ್ಲಿ ಈ ಕಾಮಗಾರಿ ನಡೆಸಲು ಯಾವುದೇ ಕಂಪೆನಿಗಳು ಇಲ್ಲವೇ ಎಂದು ಯಡಿಯೂರಪ್ಪ ಪ್ರಶ್ನಿಸಿದರು. ಕೆಟಿಪಿಪಿ ಕಾಯ್ದೆ ಪ್ರಕಾರ ಯಾವುದೇ ಬೃಹತ್ ಕಾಮಗಾರಿಯನ್ನು ನಡೆಸಬೇಕೆಂದರೆ ಶೇ.50ರಷ್ಟು ಮೊತ್ತದ ಕಾಮಗಾರಿಯನ್ನು ಬೇರೆಡೆ ನಿರ್ವಹಿಸಿರಬೇಕೆಂಬ ಷರತ್ತುಗಳಿವೆ. ಭದ್ರಾಮೇಲ್ದಂಡೆ ಯೋಜನೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ನ್ಯಾಷನಲ್ ಪ್ರಾಜೆಕ್ಟ್ ಕನ್‍ಸ್ಟ್ರಕ್ಷನ್ ಕಾಪೆರ್Çರೇಷನ್ ಲಿಮಿಟೆಡ್ ಮತ್ತು ಅಮ್ಮ ಕನ್‍ಸ್ಟ್ರಕ್ಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಗಳು ಮಣಿಪುರ ಹಾಗೂ ತ್ರಿಪುರಾದಲ್ಲಿ ಕಾಮಗಾರಿ ನಡೆಸಿದ್ದೇವೆ ಎಂದು ಪ್ರಮಾಣಪತ್ರವನ್ನು ಲಗತ್ತಿಸಿವೆ.
ನ್ಯಾಷನಲ್ ಪ್ರಾಜೆಕ್ಟ್ ಕನ್‍ಸ್ಟ್ರಕ್ಷನ್ ಕಾಪೆರ್Çರೇಷನ್ ಲಿಮಿಟೆಡ್ ಕಂಪೆನಿ ಮಣಿಪುರದಲ್ಲಿ 124,59,00,000 ಮೊತ್ತದ ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇವೆ ಎಂದು ಪ್ರಮಾಣಪತ್ರ ಹಾಕಿದೆ. ಅದೇ ರೀತಿ ಮತ್ತೊಂದು ಕಂಪೆನಿ ಅಮ್ಮ ಕನ್‍ಸ್ಟ್ರಕ್ಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ತ್ರಿಪುರಾದಲ್ಲಿ 28,48,76,100 ಮೊತ್ತದ ಕಾಮಗಾರಿ ನಡೆಸಿದ್ದೇವೆ ಎಂದು ಹೇಳಿದೆ.
ವಾಸವ್ತವವಾಗಿ ಈ ಎರಡೂ ಕಂಪೆನಿಗಳು ಎರಡು ರಾಜ್ಯದ ಕಾರ್ಯಪಾಲಕ ಅಭಿಯಂತರರ ಎರಡು ಸಹಿಗಳನ್ನು ಒಬ್ಬರೇ ಅಧಿಕಾರಿ ಹಾಕಿದ್ದಾರೆ ಎಂದು ಯಡಿಯೂರಪ್ಪ ದೂರಿದರು.
ಈಗಾಗಲೇ ಈ ಎರಡೂ ಕಂಪೆನಿಗಳು ಮಣಿಪುರ ಮತ್ತು ತ್ರಿಪುರಾದಲ್ಲಿ ಯಾವುದೇ ರೀತಿಯ ಕಾಮಗಾರಿ ನಡೆಸಿಲ್ಲ ಎಂದು ಕಂಪೆನಿಗಳ ವಿರುದ್ಧ ದೂರು ನೀಡಿ ನೋಟಿಸ್ ನೀಡಿದ್ದಾರೆ. ಇಷ್ಟು ದೊಡ್ಡಮೊತ್ತದ ಕಾಮಗಾರಿಯನ್ನು ಕಂಪೆನಿಗಳಿಗೆ ನೀಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೃಹತ್ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹಾಗೂ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡದೆ ಕಣ್ಣುಮುಚ್ಚಿ ಕುಳಿತಿದ್ದರೆ ಎಂದು ಪ್ರಶ್ನಿಸಿದರು.
ನಿಮಗೆಷ್ಟು ಕಮೀಷನ್ ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯಂತ ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದೇವೆ ಎಂದು ಹೋದ ಕಡೆಯಲೆಲ್ಲಾ ಹೇಳಿದ್ದಾರೆ. 150 ಕೋಟಿಗೂ ಬೃಹತ್ ಹಗರಣ ನಡೆದಿದೆಯಲ್ಲ ಇದರಲ್ಲಿ ನಿಮ್ಮ ಪಾಲು ಎಷ್ಟು ಎಂದು ಯಡಿಯೂರಪ್ಪ ಪ್ರಶ್ನಿಸಿದರು.
ನಾನು ಈಗ ನೀರಾವರಿ ಇಲಾಖೆಯಲ್ಲಿ ನಡೆದಿರುವ ಕರ್ಮಕಾಂಡವನ್ನು ದಾಖಲೆಗಳ ಸಮೇತ ನೀಡಿದ್ದೇನೆ. ನಿಮಗೆ ತಾಕ್ಕತ್ತಿದ್ದರೆ ಸಚಿವ ಸಂಪುಟದಿಂದ ಮೊದಲು ಎಂ.ಬಿ.ಪಾಟೀಲರನ್ನು ಕೈ ಬಿಡಿ ಹಾಗೂ ಪ್ರಕರಣವನ್ನು ಸಿಬಿಐಗೆ ಕೊಡಬೇಕೆಂದು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು 10ಪರ್ಸೆಂಟ್ ಸರ್ಕಾರ ಎಂದಾಗ ದಾಖಲೆ ಕೊಡಿ ಎಂದು ಬೊಬ್ಬಡ ಹೊಡದಿದ್ದಿರಿ. ನಿಮ್ಮ ಪಕ್ಷದ ವೀರಪ್ಪಮೊಯ್ಲಿ ಅವರೇ ಕಾಂಗ್ರೆಸ್ ಪಕ್ಷದ ಟಿಕೆಟನ್ನು ಗುತ್ತಿಗೆದಾರರು ತೀರ್ಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪಕ್ಷದ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಮೂರು ಕ್ಷೇತ್ರಗಳಿಗೆ 50 ಪರ್ಸೆಂಟ್ ಕಮೀಷನ್ ದಂಧೆ ನಡೆದಿದೆ ಎಂದು ಆರೋಪಿಸಿದ್ದಾರೆ. ಇದು 30 ಪರ್ಸೆಂಟ್ ಸರ್ಕಾರ ಎಂದು ಬಿಎಸ್‍ವೈ ದೂರಿದರು.
ನನ್ನ ಮೇಲೆ ಐಟಿ ದಾಳಿ ನಡೆಯಬಹುದೆಂದು ಎಂ.ಬಿ.ಪಾಟೀಲ್ ಹೇಳುತ್ತಿದ್ದಾರೆ. ಇದು ಕೇವಲ ಒಂದು ನಿದರ್ಶನ ಮಾತ್ರ. ಕೃಷ್ಣ ಮೇಲ್ದಂಡೆ ಯೋಜನೆಯಲ್ಲೂ ಇಂತಹ ಸಾಕಷ್ಟು ಅವ್ಯವಹಾರಗಳು ನಡೆದಿವೆ. 25 ಪರ್ಸೆಂಟ್ ಕಮಿಷನ್ ನೀಡಿದರೆ ಯಾರಿಗೆ ಬೇಕಾದರೂ ಕಾಮಗಾರಿ ಸಿಗುತ್ತದೆ. ಈ ಹಗಲು ದರೋಡೆ ಮಾಡುತ್ತಿರುವ ಎಂ.ಬಿ.ಪಾಟೀಲ್ ಸಾರ್ವಜನಿಕ ಅನುಕಂಪ ಗಿಟ್ಟಿಸಿಕೊಳ್ಳಲು ಐಟಿ ಮೇಲೆ ಆರೋಪ ಮಾಡುತ್ತಿದ್ದಾರೆ. ಇನ್ನು ಮೂರು ದಿನಗಳಲ್ಲಿ ಮತ್ತೊಂದು ಕರ್ಮಕಾಂಡ ಬಯಲು ಮಾಡುತ್ತೇನೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಆರ್.ಅಶೋಕ್, ಲಕ್ಷ್ಮಣ್‍ಸವದಿ, ಗೋವಿಂದ್‍ಕಾರಜೋಳ, ಡಾ.ಅಸ್ವತ್ಥನಾರಾಯಣ, ಎನ್.ಆರ್.ರಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.