ರಾಜ್ಯದ 2ನೇ ಹಂತದ ಚುನಾವಣೆ-ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ

ಬೆಂಗಳೂರು,ಏ.20- ಲೋಕಸಭೆ ಚುನಾವಣೆಯ 2ನೇ ಹಂತದ 14 ಕ್ಷೇತ್ರಗಳ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ ಬೀಳಲಿದ್ದು, ಕಣದಲ್ಲಿರುವ ಅಭ್ಯರ್ಥಿಗಳ ಪರವಾಗಿ ನಾಯಕರು ಕೊನೆ ಕ್ಷಣದ ಅಬ್ಬರದ ಪ್ರಚಾರ ನಡೆಸಿದರು.

ಏ.23ರಂದು ಚುನಾವಣೆ ನಡೆಯುವ ಚಿಕ್ಕೋಡಿ, ಕೊಪ್ಪಳ, ಬೆಳಗಾವಿ, ಬಳ್ಳಾರಿ, ಬಾಗಲಕೋಟೆ, ಹಾವೇರಿ, ವಿಜಯಪುರ, ಧಾರವಾಡ, ಕಲಬುರಗಿ, ಉತ್ತರ ಕನ್ನಡ, ರಾಯಚೂರು, ದಾವಣಗೆರೆ, ಬೀದರ್, ಶಿವಮೊಗ್ಗ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‍ನ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ಪ್ರಚಾರದ ಅಬ್ಬರ ಮುಗಿಲು ಮುಟ್ಟಿತ್ತು.

ಭದ್ರಾವತಿಯಲ್ಲಿ ಅಮಿತ್ ಶಾ ರಾಘವೇಂದ್ರ ಪರ ರೋಡ್ ಶೋ ನಡೆಸಿದರೆ, ಸುಷ್ಮಾ ಸ್ವರಾಜ್ ಧಾರವಾಡದ ಪ್ರಹ್ಲಾದ್ ಜೋಶಿ ಪರ ಪ್ರಚಾರ ನಡೆಸಿದರು.ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಬಾಗಲಕೋಟೆಯಲ್ಲಿ ಬೈಕ್ ರ್ಯಾಲಿ ನಡೆಸುವ ಮೂಲಕ ವೀಣಾ ಕಾಶಂಪೂರ್ ಪರ ಮತ ಯಾಚನೆ ಮಾಡಿದರು.

ಧಾರವಾಡ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ವಿನಯ್ ಕುಲಕರ್ಣಿ ಪರ ಸಿದ್ದರಾಮಯ್ಯ ರೋಡ್ ಶೋ ನಡೆಸಿ ಪ್ರಚಾರ ಕೈಗೊಂಡರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್ ಮಧು ಪರವಾಗಿ ಭದ್ರಾವತಿಯಲ್ಲಿ ಭಾರೀ ರೋಡ್ ಶೋ ಮೂಲಕ ಮತಯಾಚನೆ ಮಾಡಿದ ನಂತರ ಉಂಬ್ಳೆಬೈಲಿನಲ್ಲಿ ಬಹಿರಂಗ ಸಮಾವೇಶ ನಡೆಸಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಇದಕ್ಕೂ ಮುನ್ನ ರಣತಂತ್ರ ರೂಪಿಸಿದ ಡಿ.ಕೆ.ಶಿವಕುಮಾರ್ ಮೂರು ದಶಕಗಳಿಂದ ಬದ್ಧ ವೈರಿಗಳೆನಿಸಿದ್ದ ಬಿ.ಕೆ.ಸಂಗಮೇಶ್ವರ್ ಹಾಗೂ ಅಪ್ಪಾಜಿಗೌಡರ ನಡುವೆ ಸಾಮರಸ್ಯ ಬೆರೆಸಿ ಒಂದೇ ವೇದಿಕೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದರು.ಈ ಇಬ್ಬರನ್ನು ಪ್ರಚಾರಕ್ಕೆ ಕರೆ ತಂದಿದ್ದರಿಂದ ಎರಡೂ ಪಕ್ಷಗಳ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಸೇರಿದ್ದು ವಿಶೇಷವಾಗಿತ್ತು.

ಭದ್ರಾವತಿಯಲ್ಲಿ ಬಿ.ವೈ.ರಾಘವೇಂದ್ರ ಪರ ಅಮಿತ್ ಶಾ ರ್ಯಾಲಿ ನಡೆಸಿ ಮತಯಾಚನೆ ಮಾಡಿದರು.ಸ್ಥಿರ ಸರ್ಕಾರಕ್ಕೆ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.

ತೀರ್ಥಹಳ್ಳಿಯಲ್ಲಿ ಬಿ.ಎಸ್.ಯಡಿಯೂರಪ್ಪ ರಾಘವೇಂದ್ರ ಪರವಾಗಿ ರೋಡ್ ಶೋ, ರ್ಯಾಲಿ ನಡೆಸಿ ಅಬ್ಬರದ ಪ್ರಚಾರ ಮಾಡಿದರು. ಅತ್ತ ಕಲಬುರಗಿಯಲ್ಲಿ ಕೊನೆ ಕ್ಷಣದ ಪ್ರಚಾರ ಜೋರಾಗಿತ್ತು.ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್, ಮೈತ್ರಿ ಅಭ್ಯರ್ಥಿ ಖರ್ಗೆ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿದ್ದು ಬಿರುಸಿನ ಪ್ರಚಾರ ನಡೆದಿದೆ.

ಮತದಾರರ ಮನವೊಲಿಸಲು ಅಂತಿಮ ಕಸರತ್ತು ನಡೆಸಿದ ನಾಯಕರು ಭರ್ಜರಿ ರೋಡ್ ಶೋ, ಬಹಿರಂಗ ಸಮಾವೇಶ, ರ್ಯಾಲಿಗಳನ್ನು ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.ನಾಳೆ ವಿಜಯಪುರದಲ್ಲಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಪರ ಬಿ.ಎಸ್.ಯಡಿಯೂರಪ್ಪ ಬೈಕ್ ರ್ಯಾಲಿ ಮೂಲಕ ಪ್ರಚಾರ ನಡೆಸಲಿದ್ದಾರೆ.

ಬಹಿರಂಗ ಪ್ರಚಾರ ಅಂತ್ಯಗೊಳ್ಳುವ ನಾಳೆ ಕೂಡ ವಿವಿಧ ಕ್ಷೇತ್ರಗಳಲ್ಲಿ ಭಾರೀ ಪ್ರಚಾರ ಸಭೆಗಳು ನಡೆಯಲಿವೆ. ಏ.23ರಂದು 14ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ