ಭುವನೇಶ್ವರ್: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ದೇಶಾದ್ಯಂತ 2ನೇ ಹಂತದ ಮತದಾನ ನಡೆಯುತ್ತಿದ್ದ ವೇಳೆ ಒಡಿಶಾದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, ಮಹಿಳಾ ಚುನಾವಣಾ ಅಧಿಕಾರಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಚುನಾವಣಾ ಕರ್ತವ್ಯ ತೆರಳಿದ್ದ ಮಹಿಳಾ ಅಧಿಕಾರಿಯನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಒಡಿಶಾದ ಕಂದಮಾಲ್ ಜಿಲ್ಲೆಯ ಗೋಚಪಡಾದಲ್ಲಿ ನಡೆದಿದ್ದು, ಸಂಜುಕ್ತಾ ಕಂದಮಾಲ್ ಹತ್ಯೆಗೀಡಾದ ಚುನಾವಣಾ ಅಧಿಕಾರಿ ಎಂದು ತಿಳಿದುಬಂದಿದೆ.
ಬೆಳಗಿನ ಜಾವ ಅಧಿಕಾರಿ ಮನೆಯಿಂದ ಚುನಾವಣಾ ಮತಗಟ್ಟೆಗೆ ತೆರಳುತ್ತಿದ್ದ ವೇಳೆ ಅವರ ವಾಹನವನ್ನು ಅಡ್ಡಗಟ್ಟಿದ ಬಂದೂಕುದಾರಿ ನಕ್ಸಲರು ವಾಹನಕ್ಕೆ ಬೆಂಕಿ ಹಚ್ಚಿ ಅಧಿಕಾರಿಯನ್ನು ಗುಂಡಿಟ್ಟು ಹತ್ಯೆಮಾಡಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಚುನಾವಣೆಯನ್ನು ನಕ್ಸಲರು ಬಹಿಷ್ಕರಿಸಿದ್ದು, ಕರಪತ್ರ ಬ್ಯಾನರ್ ಗಳನ್ನು ಅಂಟಿಸಿ ಚುನಾವಣೆಯನ್ನು ವಿರೋಧಿಸಿದ್ದಾರೆ. ಅಲ್ಲದೆ ಚುನಾವಣಾ ಅಧಿಸೂಚನೆ ಹೊರಬಿದ್ದ ನಂತರ ಈವರೆಗೆ ಒಡಿಶಾದಲ್ಲಿ ಸುಮಾರು 7ಕ್ಕೂ ಹೆಚ್ಚು ಬಾರಿ ಸುಧಾರಿತ ಸ್ಫೋಟಗಳನ್ನು ಬಳಸಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ್ದಾರೆ.
ನಕ್ಸಲ್ ಪೀಡಿತ ಒಡಿಶಾ ರಾಜ್ಯದ 21 ಲೋಕಸಭಾ ಕ್ಷೇತ್ರಗಳ ಪೈಕಿ ಎರಡನೇ ಹಂತದಲ್ಲಿ ಅಸ್ಕಾ, ಬಾರಾಗಡ್, ಬೋಲಂಗೀರ್, ಸುದರ್ ಗಡ್ ಹಾಗೂ ಕಂಧಮಲ್ ಸೇರಿದಂತೆ ಒಟ್ಟು 5 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಅಲ್ಲದೆ ಒಡಿಶಾ ವಿಧಾನಸಭೆಗೂ ಇದರ ಜೊತೆಯೇ ಚುನಾವಣೆ ನಡೆಸಲಾಗುತ್ತಿದ್ದು, ಈ ಐದು ಲೋಕಸಭಾ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಇಂದೇ ಮತದಾನ ನಡೆಯುತ್ತಿದೆ.
Maoists Strike on Odisha Poll Eve: Official Killed, Vehicle Torched