ಬೆಂಗಳೂರು, ಏ.17- ಚಿಕ್ಕಬಳ್ಳಾಪುರದ ಒಂದು, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೂರು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ನಗರದ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನಕ್ಕಾಗಿ 8,514 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು , ಇಂದು ಚುನಾವಣಾ ಕಾರ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಗಳು ಸಕಲ ಸಿದ್ಧತೆಗಳೊಂದಿಗೆ ಮತಕೇಂದ್ರ ತಲುಪಿದ್ದಾರೆ.
ನಗರದಲ್ಲಿ 28 ಮಸ್ಟರಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು , ಇಂದು ಬೆಳಗ್ಗೆ 9.30ಕ್ಕೆ ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ ಚುನಾವಣಾ ಸಿಬ್ಬಂದಿಗಳು ಇವಿಎಂ, ವಿವಿ ಪ್ಯಾಟ್ ಮತ್ತಿತರ ದಾಖಲೆಗಳೊಂದಿಗೆ ತಮಗೆ ನಿಗದಿಪಡಿಸಿದ ಮತಗಟ್ಟೆಗಳತ್ತ ತೆರಳಿದರು.
ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್ ಅವರು ವಿವಿಧ ಮಸ್ಟರಿಂಗ್ ಕೇಂದ್ರಗಳಿಗೆ ತೆರಳಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ನ್ಯಾಯ ಹಾಗೂ ಮುಕ್ತ ಸಮ್ಮತ ಚುನಾವಣೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದರು.
72ಲಕ್ಷ ಮತದಾರರು: ನಾಳೆ ನಡೆಯಲಿರುವ ಲೋಕಸಭಾ ಕ್ಷೇತ್ರದಲ್ಲಿ ನಗರದಲ್ಲಿರುವ 7264796 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಬೆಂಗಳೂರು ಉತ್ತರದಲ್ಲಿ 1480405 ಪುರುಷ ಮತದಾರರು , 1365594 ಮಹಿಳಾ ಮತದಾರರು ಹಾಗೂ 491 ಇತರೆ ಮತದಾರರು ಸೇರಿದಂತೆ ಒಟ್ಟು 2846490 ಮತದಾರರಿದ್ದಾರೆ.
ಬೆಂಗಳೂರು ಕೇಂದ್ರದಲ್ಲಿ 1144855 ಪುರುಷ , 1057255 ಮಹಿಳೆ ಹಾಗೂ 393 ಇತರರು ಸೇರಿದಂತೆ 2202503 ಮತದಾರರಿದ್ದರೆ, ಬೆಂಗಳೂರು ದಕ್ಷಿಣದಲ್ಲಿ 1153613 ಪುರುಷ , 1061853 ಮಹಿಳೆ ಹಾಗೂ 337 ಇತರರು ಸೇರಿದಂತೆ 2215803 ಮತದಾರರಿದ್ದಾರೆ.
1437 ವಾಹನ ಬಳಕೆ: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ 2656, ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ 2082, ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 2131, ಬೆಂಗಳೂರು ಗ್ರಾಮಾಂತರ ವ್ಯಾಪ್ತಿಗೆ ಬರುವ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ 1269 ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಒಂದು ವಿಧಾನಸಭಾ ಕ್ಷೇತ್ರದಲ್ಲಿ 376 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು , ಚುನಾವಣಾ ಕಾರ್ಯಕ್ಕೆ 982 ಕೆಎಸ್ಆರ್ಟಿಸಿ ಬಸ್, 115 ಜೀಪ್ ಹಾಗೂ 340 ಸಣ್ಣ ವ್ಯಾನ್ಗಳು ಸೇರಿದಂತೆ 1437 ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಮೂರು ಕ್ಷೇತ್ರಗಳಲ್ಲಿ 2 ಇವಿಎಂ ಬಳಕೆ: ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ಮೂರು ಲೋಕಸಭಾ ಕ್ಷೇತ್ರಗಳಲ್ಲಿ 16ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿರುವುದರಿಂದ ಎಲ್ಲಾ ಕ್ಷೇತ್ರಗಳಲ್ಲೂ 2 ಬ್ಯಾಲೆಟ್ ಇವಿಎಂ ಯೂನಿಟ್ಗಳನ್ನು ಬಳಕೆ ಮಾಡಲಾಗುತ್ತಿದೆ.
ಒಂದು ಟೇಬಲ್, ಎರಡು ಚೇರ್ಗಳಿಗೆ ಅವಕಾಶ: ನಾಳೆ ಮತದಾನ ಕೇಂದ್ರದಿಂದ 200 ಮೀಟರ್ ದೂರದಲ್ಲಿ ಅಭ್ಯರ್ಥಿಗಳು ಒಂದು ಟೇಬಲ್, ಎರಡು ಚೇರ್ ಹಾಗೂ ಸಣ್ಣ ಅಳತೆಯ ಬ್ಯಾನರ್ ಬಳಸಲು ಮಾತ್ರ ಅವಕಾಶ ನೀಡಲಾಗಿದೆ.
ಶಾಮಿಯಾನ ಅಥವಾ ಟೆಂಟ್ ಹಾಕಲು ಅನುಮತಿ ನೀಡಿಲ್ಲ. ಮತಗಟ್ಟೆ ಕೇಂದ್ರದ 100 ಮೀಟರ್ ಪರಿಮಿತಿಯೊಳಗೆ ಯಾವುದೇ ರೀತಿಯ ಪ್ರಚಾರ ಮಾಡುವುದನ್ನು ಉಲ್ಲಂಘಿಸಲಾಗಿದೆ.
ಅದೇ ರೀತಿ 100 ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ಬಳಕೆ, ವೀಡಿಯೋ ಚಿತ್ರೀಕರಣ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಷೇಧಿಸಲಾಗಿದ್ದು, ಎಲ್ಲಾ ನಾಗರಿಕರು ಈ ನಿಯಮವನ್ನು ಚಾಚೂ ತಪ್ಪದೆ ಪಾಲಿಸುವುದು ಕಡ್ಡಾಯವಾಗಿದೆ.
477 ವೆಬ್ ಕ್ಯಾಸ್ಟಿಂಗ್ ಕಣ್ಗಾವಲು : ನ್ಯಾಯ ಹಾಗೂ ಮುಕ್ತ ಚುನಾವಣೆಗಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು , ಮತದಾರರು ಭಯ ಭೀತಿ ವಾತಾವರಣದಿಂದ ಹೊರ ಬಂದು ಪಾರದರ್ಶಕವಾಗಿ ಮತ ಚಲಾಯಿಸುವುದನ್ನು ಸಾಕ್ಷೀಕರಿಸುವ ಉದ್ದೇಶದಿಂದ ಈ ಮೂರೂ ಕ್ಷೇತ್ರಗಳಲ್ಲಿ 477 ವೆಬ್ ಕ್ಯಾಸ್ಟಿಂಗ್ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ ಎಂದು ಮಂಜುನಾಥ್ ಪ್ರಸಾದ್ ಹೇಳಿದರು.
ಬೆಂಗಳೂರು ಉತ್ತರದಲ್ಲಿ 242, ಬೆಂಗಳೂರು ಕೇಂದ್ರದಲ್ಲಿ 113 ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 122 ವೆಬ್ ಕ್ಯಾಸ್ಟಿಂಗ್ ಕೇಂದ್ರಗಳನ್ನು ತೆರೆಯಲಾಗಿದ್ದು , ಅದೇ ರೀತಿ 1234 ಮೈಕ್ರೋ ಅಬ್ಸರ್ವರ್ಗಳನ್ನು ನೇಮಿಸಲಾಗಿದೆ.
ಸಖಿ ಮತಗಟ್ಟೆ: ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರು ಹೆಚ್ಚು ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹ ಉದ್ದೇಶದಿಂದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ ಎಂದರು.
ವಿಕಲಚೇತನರಿಗೆ ಸಕಲ ಸೌಲಭ್ಯ:ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷ ಚೇತನ ಮತದಾರರಿಗೆ 8514 ಮತಗಟ್ಟೆಗಳಲ್ಲೂ ರ್ಯಾಂಪ್, ವ್ಹೀಲ್ ಚೇರ್ ಮತ್ತು ಬೂತಗನ್ನಡಿ ವ್ಯವಸ್ಥೆ ಮಾಡಲಾಗಿದೆ.
ವಿಶೇಷಚೇತನರು ಮತ ಚಲಾಯಿಸಲು ಅನುಕೂಲವಾಗುವಂತೆ ಮತಗಟ್ಟೆ ಮಾಹಿತಿಗಳನ್ನೊಳಗೊಂಡ ಬ್ರೈಲ್ ಲಿಪಿ ಗೈಡ್ಗಳನ್ನು ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಇಡುವುದರ ಜತೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಸಹ ಬ್ರೈಲ್ ಲಿಪಿಯಲ್ಲಿ ಮುದ್ರಿಸಲು ತೀರ್ಮಾನಿಸಲಾಗಿದೆ.
ವಿಶೇಷ ಚೇತನರು ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಿ ಮತ್ತೆ ತಮ್ಮ ಸ್ಥಳಕ್ಕೆ ಹಿಂದಿರುಗಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು , ಈ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಚುನಾವಣಾಧಿಕಾರಿಗಳು ಕರೆ ನೀಡಿದರು.
ಎಣಿಕಾ ಕೇಂದ್ರ: ಮೇ 23ರಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮತ ಎಣಿಕೆ ಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ನಲ್ಲಿ ನಡೆಯಲಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ಯಾಲೆಸ್ ರಸ್ತೆಯ ಮೌಂಟ್ ಕಾರ್ಮೆಲ್ ಮಹಿಳಾ ಪಿಯು ಕಾಲೇಜು ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತ ಎಣಿಕೆ ಜಯನಗರದ ಎಸ್ಎಸ್ಎಂಆರ್ವಿ ಪಿಯು ಕಾಲೇಜಿನಲ್ಲಿ ನಡೆಯಲಿದೆ.
ನಾಳೆ ಮತದಾನ ಮುಗಿಯುತ್ತಿದ್ದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ನಲ್ಲಿ ಮತ ಯಂತ್ರಗಳನ್ನು ಆಯಾ ಎಣಿಕಾ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್ ರೂಂಗೆ ಸಾಗಿಸಲಾಗುವುದು.
ಫಲಿತಾಂಶದವರೆಗೂ ಸ್ಟ್ರಾಂಗ್ ರೂಂಗೆ ಕೇಂದ್ರ ಪಡೆ ಹಾಗೂ ರಾಜ್ಯ ಪೊಲೀಸ್ ಪಡೆಯ ಸರ್ಪಗಾವಲು ವಿಧಿಸಲಾಗುವುದು.ಮಾತ್ರವಲ್ಲ ಮೂರು ಪಾಳಿಯಲ್ಲಿ ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.
ಅಧಿಕಾರಿಗಳ ನಿಯೋಜನೆ: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿ ಐಎಎಸ್ ಅಧಿಕಾರಿ ಡಾ.ಲೋಕೇಶ್ ಅವರನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಐಎಎಸ್ ಅಧಿಕಾರಿ ಎಸ್.ಎಸ್. ನಕುಲ್ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿ ಬೆಂಗಳೂರು ಜಿಲ್ಲಾಧಿಕಾರಿ ಬಿ.ಎಂ.ವಿಜಯಶಂಕರ್ ಅವರನ್ನು ನಿಯೋಜಿಸಲಾಗಿದೆ.
ದಕ್ಷಿಣ ಮತ್ತು ಕೇಂದ್ರ ಲೋಕಸಭಾ ಕ್ಷೇತ್ರಗಳಿಗೆ ಪೊಲೀಸ್ ವೀಕ್ಷಕರನ್ನಾಗಿ ಐಪಿಎಸ್ ಅಧಿಕಾರಿ ಅನಿತಾ ಪುಂಜಾ ಅವರನ್ನು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಐಪಿಎಸ್ ಅಧಿಕಾರಿ ಜೋಗ ಉಮೇಶ್ ಅವರನ್ನು ಪೊಲೀಸ್ ವೀಕ್ಷಕರನ್ನಾಗಿ ನಿಯೋಜಿಸಲಾಗಿದೆ.