ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ನಡುವೆ ಮುಂದುವರೆದ ವಾಕ್ಸಮರ

ಸುಲ್ತಾನ್‍ಬಥೇರಿ(ಕೇರಳ), ಏ.17-ಲೋಕಸಭಾ ಚುನಾವಣೆ ಕಾವೇರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡುವಣ ಆರೋಪ ಪತ್ಯಾರೋಪಗಳ ವಾಕ್ಸಮರ ಮತ್ತಷ್ಟು ತೀವ್ರ ಗೊಂಡಿದೆ.

ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಸುಲ್ತಾನ್‍ಬಥೇರಿಯಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸಿದರು.

ನಾನು ಸುಳ್ಳು ಮತ್ತು ಪೊಳ್ಳು ಭರವಸೆಗಳನ್ನು ನೀಡುವ ಮೋದಿ ಅವರ ಮನ್ ಕೀ ಬಾತ್‍ನಂತೆ ಭಾಷಣ ಮಾಡಲು ಇಲ್ಲಿಗೆ ಬಂದಿಲ್ಲ. ಸುಳ್ಳು ಆಶ್ವಾಸನೆಗಳನ್ನು ನೀಡಿ ನನ್ನ ಉದ್ದೇಶವು ಅಲ್ಲ ಎಂದು ಹೇಳಿದರು.

ಕಳೆದ 5ವರ್ಷಗಳಲ್ಲಿ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ನೀಡಿದ್ದ ಬಹುತೇಕ ಭರವಸೆಗಳು ಭರವಸೆಗಳಾಗಿಯೇ ಉಳಿದಿವೆ. ಬಡತನ ನಿರ್ಮೂಲನೆ ಆಗಿಲ್ಲ, ನಿರುದ್ಯೋಗ ನಿವಾರಣೆಯಾಗಿಲ್ಲ, ರೈತರ ಜೀವನ ಮಟ್ಟ ಸುಧಾರಣೆಯಾಗಿಲ್ಲ ಎಂದು ರಾಹುಲ್ ಟೀಕಿಸಿದರು.

ಇದಕ್ಕೂ ಮುನ್ನ ಕಣ್ಣೂರಿನಲ್ಲಿ ಕಾಂಗ್ರೆಸ್ ಸಂಸದೀಯ ಸಮಿತಿ ಸಭೆಯಲ್ಲಿ ರಾಹುಲ್ ಪಾಲ್ಗೊಂಡಿ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಥಾ ಪ್ರಕಾರ ಪ್ರಧಾನಿ ಮೋದಿ ವಿರುದ್ಧ ಆರೋಪಗಳ ಸುರಿಮಳೆಗೈದರು.

ಮಹಾದೇಶ ಭಕ್ತರಂತೆ ಕೊಚ್ಚಿಕೊಳ್ಳುತ್ತಿರುವ ಮೋದಿ ದೇಶವನ್ನು ವಿಭಜನೆಯನ್ನು ಮಾಡಿ ಆಂತರಿಕ ಬಿಕ್ಕಟ್ಟು ಸೃಷ್ಟಿಸಿದ್ದಾರೆ. ಈ ಚೌಕಿದಾರನಿಂದ ದೇಶದ ರಕ್ಷಣೆ ಸಾಧ್ಯವಿಲ್ಲ ಎಂದು ಟೀಕಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ