ಕರಾವಳಿ, ಮಲೆನಾಡು ಭಾಗದಲ್ಲಿ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಎರಡನೇ ದಿನವಾದ ಇಂದು ಮಂಗಳೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಮಿಂಚಿನ ಸಂಚಾರ

ಬೆಂಗಳೂರು, ಮಾ.21-ಕರಾವಳಿ, ಮಲೆನಾಡು ಭಾಗದಲ್ಲಿ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಎರಡನೇ ದಿನವಾದ ಇಂದು ಮಂಗಳೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಮಿಂಚಿನ ಸಂಚಾರ ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸಿದರು.

ಬೆಳಗ್ಗೆ ಮಂಗಳೂರಿನ ಸಕ್ರ್ಯೂಟ್‍ಹೌಸ್‍ನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 26 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಜೊತೆ ಸಮಾಲೋಚನೆ ನಡೆಸಿದರು. ನಂತರ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರ ಜೊತೆಯೂ ಚರ್ಚೆ ನಡೆಸಿದರು.

 

ಈ ಸಂದರ್ಭದಲ್ಲಿ ಕರಾವಳಿಯ ಉಡುಪಿ ಮತ್ತು ಮಂಗಳೂರು ಜಿಲ್ಲೆಯ ಸ್ಥಳೀಯ ರಾಜಕಾರಣದ ಬಗ್ಗೆ ರಾಹುಲ್‍ಗಾಂಧಿ ಕಾರ್ಯಕರ್ತರಿಂದ ಮಾಹಿತಿ ಪಡೆದುಕೊಂಡರು.

ಅಷ್ಟಕ್ಕೇ ಸುಮ್ಮನಾಗದೆ, ಬೂತ್‍ಮಟ್ಟದ ಸದಸ್ಯತ್ವ ಮತ್ತು ಅವರ ಮಾಹಿತಿಯನ್ನು ಖುದ್ದಾಗಿ ಪರಿಶೀಲಿಸಿದ ರಾಹುಲ್‍ಗಾಂಧಿ, ಕೆಲವು ಕಾರ್ಯಕರ್ತರಿಗೆ ಕರೆ ಮಾಡಿ ತಾವೇ ಖುದ್ದಾಗಿ ಮಾತನಾಡಿದರು.

ಪಕ್ಷ ಸಂಘಟನೆ ಮತ್ತು ಹಿರಿಯ ನಾಯಕರ ಸ್ಪಂದನೆ ಬಗ್ಗೆ ಮಾಹಿತಿ ಪಡೆದುಕೊಂಡರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೋಮುವಾದಿ ಶಕ್ತಿಗಳನ್ನು ಹತ್ತಿಕ್ಕಬೇಕಾದರೆ ಕಾಂಗ್ರೆಸ್ ಸಾಕಷ್ಟು ಬದಲಾವಣೆ ಮಾಡಿಕೊಳ್ಳುವ ಅಗತ್ಯ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೊಳಿಸಿರುವ ಜನಪರ ಯೋಜನೆಗಳನ್ನು ಮನೆ ಮನೆಗೆ ತೆರಳಿ ಮಾಹಿತಿ ನೀಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸೂಚನೆ ನೀಡಿದರು.

ಕಾಂಗ್ರೆಸ್ ಒಂದು ಸೇವಾ ಸಂಸ್ಥೆ. ಜನಪರವಾಗಿ ಸದಾ ಹೋರಾಟ ಮಾಡುವ ಮೂಲಕ ಜನಾಂದೋಲನ ರೂಪಿಸುವ ಸಂಘಟನೆ ಕಾಂಗ್ರೆಸ್. ಅಧಿಕಾರ ಎಂಬುದು ಎರಡನೇ ಆದ್ಯತೆ. ಹೀಗಾಗಿ ಹಿರಿಯ ನಾಯಕರು ಅಧಿಕಾರ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡು ತಟಸ್ಥರಾಗಿ ಉಳಿಯುವ ಬದಲು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಚುನಾವಣೆ ಸಂದರ್ಭದಲ್ಲಿ ತಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಕ್ಷಕ್ಕಾಗಿ ದುಡಿಯಬೇಕು ಎಂದು ಕರೆ ನೀಡಿದರು.

ನಿನ್ನೆ ರಾಹುಲ್‍ಗಾಂಧಿ ಅವರ ಪ್ರವಾಸ ಉಡುಪಿ ಮತ್ತು ಮಂಗಳೂರು ಜಿಲ್ಲೆಯಲ್ಲಿ ಭಾರೀ ಸಂಚಲನವನ್ನೇ ಮೂಡಿಸಿತ್ತು. ಹಿಂದೆಂದೂ ಸೇರದಷ್ಟು ಜನ ರಾಹುಲ್‍ಗಾಂಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದನ್ನು ಕಂಡು ಸ್ಥಳೀಯ ಕಾಂಗ್ರೆಸ್ಸಿಗರೇ ಅಚ್ಚರಿ ವ್ಯಕ್ತಪಡಿಸಿದರು.
ಜೊತೆಗೆ ರಾಹುಲ್‍ಗಾಂಧಿಯವರು ಸರ್ವಧರ್ಮ ಸಮಭಾವ ಸಾರುವಂತೆ ದೇವಸ್ಥಾನ, ದರ್ಗಾ, ಚರ್ಚ್‍ಗಳಿಗೆ ಭೇಟಿ ನೀಡಿದರು.
ನಂತರ ತಡರಾತ್ರಿ 11 ಗಂಟೆಯವರೆಗೆ ನಿರಂತರವಾಗಿ ಕಾರ್ಯಕ್ರಮದಲ್ಲಿ ರಾಹುಲ್‍ಗಾಂಧಿ ಭಾಗವಹಿಸಿದ್ದರು. ರಾಣಿ ಅಬ್ಬಕ್ಕ ದೇವಿ ಪ್ರತಿಮೆಗೆ ಮಾಲಾರ್ಪಣೆ ಮಾಡುವುದು ಮತ್ತು ರೋಡ್‍ಶೋ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತಾದರೂ ಸಮಯ ಅಭಾವದಿಂದ ನಿನ್ನೆ ಸಾಧ್ಯವಾಗಿರಲಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ