ಬೆಂಗಳೂರು, ಏ.16-ರಾಜ್ಯದಲ್ಲಿ ಎರಡು ಹಂತದಲ್ಲಿ ನಡೆಯುವ ಲೋಕಸಭಾ ಚುನಾವಣೆಯ ಮತದಾನಕ್ಕಾಗಿ ಒಟ್ಟು 58,225 ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು, ಭದ್ರತೆಗಾಗಿ ಒಟ್ಟಾರೆ 90,997ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದ ಮತದಾನ 14 ಕ್ಷೇತ್ರಗಳಲ್ಲಿ ಗುರುವಾರ ನಡೆಯಲಿದ್ದು, ಮುಕ್ತ ಹಾಗೂ ಶಾಂತಿಯುತ ಮತದಾನ ನಡೆಸಲು ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ವಿವರಿಸಿದರು.
ಚುನಾವಣಾ ಕರ್ತವ್ಯಕ್ಕಾಗಿ 282 ಡಿವೈಎಸ್ಪಿಗಳು, 851 ಇನ್ಸ್ಪೆಕ್ಟರ್ಗಳು, 1118 ಪಿಎಸ್ಐಗಳು, 4,205 ಎಎಸ್ಐಗಳು, 42,950 ಹೆಡ್ಕಾನ್ಸ್ಟೆಬಲ್ ಹಾಗೂ ಕಾನ್ಸ್ಟೆಬಲ್ಗಳು, 40,117ಗೃಹ ರಕ್ಷಕ ಮತ್ತು ನಾಗರಿಕ ರಕ್ಷಣಾ ಸಿಬ್ಬಂದಿ ಸೇರಿ 90,997 ಮಂದಿಯನ್ನು ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ.
ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ 30,197 ಮತಗಟ್ಟೆಗಳು ಬರಲಿದ್ದು, ಅದಕ್ಕಾಗಿ 45 ಸಾವಿರ ಮಂದಿ ಪೊಲೀಸ್ ಸಿಬ್ಬಂದಿಯನ್ನು ಮತದಾನ ಭದ್ರತಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ನಡೆಯುವ ಚುನಾವಣೆಯಲ್ಲಿ ಮಂಡ್ಯ, ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ಅತಿಸೂಕ್ಷ್ಮ ಎಂದು ಪರಿಗಣಿಸಲಾಗಿದ್ದು, ಈ ನಾಲ್ಕು ಕ್ಷೇತ್ರಗಳಿಗೆ 19 ಸಾವಿರ ಪೊಲೀಸ್ ಮತ್ತು ಹೋಂಗಾಡ್ರ್ಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಸೂಕ್ಷ್ಮ ಮತಗಟ್ಟೆಗಳು:
ಮೊದಲ ಹಂತದಲ್ಲಿ 30,197 ಮತಗಟ್ಟೆಗಳಿದ್ದು, ಅದರಲ್ಲಿ 6318 ಸೂಕ್ಷ್ಮ, 23,879 ಸಾಮಾನ್ಯ ಮತಗಟ್ಟೆಗಳಿವೆ. 1782 ಸೆಕ್ಟರ್ ಮೊಬೈಲ್ಸ್, 474 ಮೇಲುಸ್ತುವಾರಿ ಗಸ್ತು ಪಡೆ, 182 ಬಿಎಸ್ಪಿ ಸಂಚಾರಿ ಗಸ್ತು, 534 ಸಂಚಾರಿ ತಂಡಗಳು, 443 ಸ್ಥಿರ ಕಣ್ಗಾವಲು ತಂಡ, ಭದ್ರತಾ ಕೊಠಡಿಗಳಿಗೆ ಕೇಂದ್ರೀಯ 5 ಪಡೆಗಳ ಕಂಪನಿಗಳು, ಸೂಕ್ಷ್ಮ ಮತಗಟ್ಟೆಗಳಿಗೆ 880 ಕೇಂದ್ರೀಯ ತುಕಡಿಗಳು, 138 ಕೆಎಸ್ಆರ್ಪಿ, 352 ಡಿಎಆರ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ.
ಎರಡನೇ ಹಂತದ ಚುನಾವಣೆಯಲ್ಲಿ 28,128 ಮತಗಟ್ಟೆಗಳಿದ್ದು, ಅದರಲ್ಲಿ 5674 ಸೂಕ್ಷ್ಮ, 22,354 ಸಾಮಾನ್ಯ ಮತಗಟ್ಟೆಗಳಿವೆ. 1531 ವಲಯ ಸಂಚಾರಿ ಗಸ್ತು ಪಡೆಗಳು, 337 ಮೇಲುಸ್ತುವಾರಿ ದಳಗಳು, 125 ಡಿಎಸ್ಪಿ ಸಂಚಾರಿ ಗಸ್ತು, 382 ಸಂಚಾರಿ ತಂಡಗಳು, 384 ಸ್ಥಿರ ಕಣ್ಗಾವಲು ತಂಡಗಳು, ಸೂಕ್ಷ್ಮ ಮತಗಟ್ಟೆಗಳಿಗೆ 212 ಸಿಆರ್ಪಿಎಫ್ ತುಕಡಿಗಳು, 143 ಕೆಎಸ್ಆರ್ಪಿ, 340 ಡಿಎಆರ್ ತಂಡಗಳನ್ನು ನಿಯೋಜಿಸಲಾಗಿದೆ.
ಭದ್ರತೆಯ ಸ್ವರೂಪ:
ಮತದಾನ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆಯ ಚಕ್ರವ್ಯೂಹವನ್ನೇ ರಚಿಸಲಾಗಿದೆ ಎಂದು ಅವರು ತಿಳಿಸಿದರು.
ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಒಬ್ಬ ಹೆಡ್ಕಾನ್ಸ್ಟೆಬಲ್ ಮತ್ತು ಒಬ್ಬ ಹೋಂಗಾರ್ಡ್, ಸಾಮಾನ್ಯ ಮತಗಟ್ಟೆಗೆ ಒಬ್ಬ ಕಾನ್ಸ್ಟೆಬಲ್ ಅಥವಾ ಒಬ್ಬ ಗೃಹರಕ್ಷಕ ದಳ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ತಲಾ ಒಬ್ಬ ಪಿಎಸ್ಐ, ಎಎಸ್ಐ, ಹೆಡ್ಕಾನ್ಸ್ಟೆಬಲ್, ಕಾನ್ಸ್ಟೆಬಲ್, ಹೋಂ ಗಾರ್ಡ್ಗಳನ್ನೊಳಗೊಂಡ ಸೆಕ್ಟರ್ ಮೊಬೈಲ್ ಪಡೆಗಳು 15 ಬೂತ್ಗಳಿಗೆ ಒಂದರಂತೆ ಗಸ್ತು ತಿರುಗುತ್ತಿದ್ದು, ಎಲ್ಲಿಯೂ ಜನ ಗುಂಪುಗೂಡದಂತೆ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುತ್ತಾರೆ.
ಒಬ್ಬ ಪಿಎಸ್ಐ, ಒಬ್ಬ ಹೆಡ್ಕಾನ್ಸ್ಟೆಬಲ್, ಒಬ್ಬ ಹೋಂಗಾರ್ಡ್ ಒಳಗೊಂಡ ಸೂಪರ್ವೈಸರಿ ಮೊಬೈಲ್ ತಂಡಗಳು ಮತದಾನದ ಮೇಲೆ ತೀವ್ರ ನಿಗಾ ವಹಿಸುತ್ತವೆ.
ಡಿವೈಎಸ್ಪಿ, ಒಬ್ಬ ಕಾನ್ಸ್ಟೆಬಲ್, ಹೆಡ್ ಕಾನ್ಸ್ಟೆಬಲ್, ಒಬ್ಬ ಹೋಂಗಾರ್ಡ್ ಸಿಬ್ಬಂದಿಗಳನ್ನೊಳಗೊಂಡ ಸಬ್ ಡಿವಿಷನ್ ಮೊಬೈಲ್ ತಂಡಗಳನ್ನು ರಚಿಸಲಾಗಿದೆ. ಚೆಕ್ಪೋಸ್ಟ್ಗಳಿಗೆ ಹೆಡ್ಕಾನ್ಸ್ಟೆಬಲ್ ಹಾಗೂ ಹೋಂಗಾರ್ಡ್ಗಳನ್ನು ಎರಡು ಪಾಳಿಯ ಕೆಲಸ ಮಾಡಲು ನಿಯೋಜಿಸಲಾಗಿದೆ.
ಫ್ಲೈಯಿಂಗ್ ಸ್ಕ್ವಾಡ್ನಲ್ಲಿ ಹೆಡ್ಕಾನ್ಸ್ಟೆಬಲ್, ಹೋಂಗಾರ್ಡ್ ಇರಲಿದ್ದಾರೆ.ಕೆಎಸ್ಆರ್ಪಿ ಸಿವಿಲ್ ನೋಡಲ್ ಆಫೀಸರ್ನಲ್ಲಿ ಇಬ್ಬರು ಎಎಸ್ಐಗಳು ಮತ್ತು ಸಿಬ್ಬಂದಿ ಇರಲಿದ್ದಾರೆ.
ಚುನಾವಣೆ ಶಾಂತಿಯುತವಾಗಿ ನಡೆಯಲು ನಿರಂತರವಾಗಿ ಭದ್ರತೆ ಒದಗಿಸುತ್ತಿದ್ದು, ಶಾಂತಿ ಕದಡುವ ಘಟನೆಗಳ ಮೇಲೆ ಹದ್ದಿನ ಕಣ್ಣಿಟ್ಟಿರುತ್ತಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಈವರೆಗೂ ಚುನಾವಣೆಗೆ ಸಂಬಂಧಪಟ್ಟಂತೆ 18 ಕ್ರಿಮಿನಲ್ ಕೇಸುಗಳನ್ನು ದಾಖಲಿಸಲಾಗಿದೆ. 4 ಸಾವಿರ ಮಂದಿಯ ಮೇಲೆ ಮುಂಜಾಗ್ರತಾ ಕ್ರಮವಾಗಿ ನಿಗಾ ವಹಿಸಲಾಗಿದೆ ಎಂದು ಹೇಳಿದರು.
ದೇಶಾದ್ಯಂತ ಏಕಕಾಲಕ್ಕೆ ವಿವಿಧ ಹಂತಗಳಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಸದ್ಯಕ್ಕೆ ಬಂದಿರುವ 55 ಕಂಪನಿ ಕೇಂದ್ರ ಪಡೆಯನ್ನು ಮೊದಲ ಹಂತದ ಚುನಾವಣೆಗೂ, 57 ಕಂಪನಿ ಕೇಂದ್ರ ಪಡೆಯನ್ನು 2ನೇ ಹಂತದ ಚುನಾವಣೆಗೆ ನಿಯೋಜಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ 98,055 ಪರವಾನಗಿ ಹೊಂದಿದ ಶಸ್ತ್ರಗಳ ಪೈಕಿ 95,422 ಶಸ್ತ್ರಗಳನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಅಪರಾಧ ಹಿನ್ನೆಲೆ ಹೊಂದಿರುವ ರೌಡಿಶೀಟರ್ ಹಾಗು ದುಷ್ಕರ್ಮಿಗಳ ಮೇಲೆ ನಿಗಾ ವಹಿಸಿದ್ದು, 47,427 ವ್ಯಕ್ತಿಗಳ ವಿರುದ್ದ 44,844 ಮುಂಜಾಗ್ರತಾ ಪ್ರಕರಣಗಳನ್ನು ದಾಖಲಿಸಲಾಗಿದೆ. ಇವರಲ್ಲಿ 12,621 ವ್ಯಕ್ತಿಗಳು ಸಾರ್ವಜನಿಕರಲ್ಲಿ ಭಯ ಹುಟ್ಟಿಸುವಂತವರಾಗಿದ್ದಾರೆ.
ಮುಂಜಾಗ್ರತಾ ಕ್ರಮ:
ಪೊಲೀಸರು ಈವರೆಗೂ ಅಬಕಾರಿ ಕಾಯ್ದೆಯಡಿ 1594 ಪ್ರಕರಣಗಳನ್ನು ದಾಖಲಿಸಿದ್ದು, 11,220 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
15,72,17,616 ರೂ. ಹಣ 23,248 ಲೀಟರ್ ಮದ್ಯ, 3.12 ಕೆಜಿ ಚಿನ್ನ, 43.85 ಕೆಜಿ ಬೆಳ್ಳಿ, 38 ಲಕ್ಷ ರೂ. ಮೌಲ್ಯದ ಇತರ ವಸ್ತುಗಳನ್ನು ಪೊಲೀಸ್ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.