ಮಂಡ್ಯ ಕ್ಷೇತ್ರದಲ್ಲಿ ಶಾಂತಿಯುತ ಮತದಾನಕ್ಕೆ ಬಿಗಿ ಭದ್ರತಾ ಕ್ರಮ-ಎಡಿಜಿಪಿ ಕಮಲ್‍ಪಂಥ್

ಬೆಂಗಳೂರು, ಏ.16-ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಸಾಕಷ್ಟು ಭದ್ರತೆ ಒದಗಿಸಿದ್ದು, ಕ್ಷೇತ್ರದಲ್ಲಿ ಶಾಂತಿಯುತ ಮತದಾನ ಬಿಗಿ ಭದ್ರತಾ ಕ್ರಮಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಕಮಲ್‍ಪಂತ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ಸುಮಲತಾ ಅವರಿಗೆ ಅನುಮಾನಗಳಿದ್ದು, ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಅದನ್ನು ಆಧರಿಸಿ ನಾವು ಸೂಕ್ತ ಕ್ರಮಕೈಗೊಂಡಿದ್ದು, ಸುಮಲತಾ ಅವರ ಭದ್ರತೆಗಾಗಿ ಇಬ್ಬರು ಪಿಎಸ್‍ಐಗಳನ್ನು ಖಾಯಂ ಆಗಿ ನೇಮಿಸಿದ್ದೇವೆ. ಅವರು ಪ್ರಚಾರಕ್ಕೆ ಹೋದೆಡೆಯಲ್ಲೆಲ್ಲ ಬೆಳ್ಳಗೆಯಿಂದ ಸಂಜೆಯವರೆಗೂ ಪಿಎಸ್‍ಐಗಳು ಅವರ ಜೊತೆ ಇರುತ್ತಾರೆ.

ಸ್ಥಳೀಯ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂಬ ಕಾರಣಕ್ಕಾಗಿ ಬೆಂಗಳೂರಿನ ಸಿಐಡಿಯಿಂದ ಡಿವೈಎಸ್ಪಿ ಯೊಬ್ಬರನ್ನು ನೇಮಿಸಲಾಗಿದೆ.

ಸಿಆರ್‍ಪಿಎಫ್‍ನ ಅರ್ಧ ತುಕಡಿ ಸದಾ ಅವರನ್ನು ಫಾಲೋ ಮಾಡಲಿದೆ. ರ್ಯಾಲಿ ಮತ್ತು ಸಾರ್ವಜನಿಕ ಸಭೆಗಳ ಸಂದರ್ಭದಲ್ಲಿ ಕೆಎಸ್‍ಆರ್‍ಪಿಯ ಭದ್ರತೆ ಒದಗಿಸಲಾಗುತ್ತಿದೆ. ಮಂಡ್ಯ ಚುನಾವಣಾ ಕಣದಲ್ಲಿ ಒಂದೆರಡು ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಶಾಂತಿಯುತವಾಗಿದೆ. ಎಲ್ಲಿಯೂ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಹೇಳಿದರು.

ಕ್ಷೇತ್ರದ 7 ವಿಧಾನಸಭಾ ಕ್ಷೇತ್ರಗಳಲ್ಲೂ 7 ಭದ್ರತಾ ಕೇಂದ್ರಗಳನ್ನು ತೆರೆಯಲಾಗಿದೆ. ಅತಿ ಸೂಕ್ಷ್ಮ ಕ್ಷೇತ್ರ ಎಂದು ಪರಿಗಣಿಸಲಾಗಿದೆ ಎಂದು ಹೇಳಿದರು.

ಐಜಿಪಿಯೊಬ್ಬರನ್ನು ಕೇಂದ್ರದ ಉಸ್ತುವಾರಿಗಾಗಿ ನಿಯೋಜಿಸಲಾಗಿದೆ. ಹೊರಗಿನ ಜಿಲ್ಲೆಯಿಂದ 700 ಜನ ಪೊಲೀಸರನ್ನು ಭದ್ರತೆಗೆ ಒದಗಿಸಲಾಗಿದೆ ಎಂದು ತಿಳಿಸಿದರು.

ಈಗ ಸುಮಲತಾ ಅವರು ಭದ್ರತೆ ಬಗ್ಗೆ ಸಮಾಧಾನಗೊಂಡಿದ್ದಾರೆ.ಕ್ಷೇತ್ರದಲ್ಲಿ ಪೊಲೀಸ್ ರಕ್ಷಣೆ ಬಗ್ಗೆ ಎರಡು ಭಾಗದವರಿಗೆ ಸಮಾಧಾನ ಇದೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ