ಐಟಿ ಕಚೇರಿ ಮುಂದೆ ಪ್ರತಿಭಟನೆ ಹಿನ್ನಲೆ ನೋಟೀಸ್-15 ದಿನಗಳ ಕಾಲಾವಕಾಶ ಕೋರಿರುವ ಮಾಜಿ ಸಿ.ಎಂ.ಸಿದ್ದರಾಮಯ್ಯ

ಮೈಸೂರು,ಏ.15- ಐಟಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ವಿಚಾರವಾಗಿ ನನಗೂ ನೋಟಿಸ್ ಬಂದಿದ್ದು ಅದಕ್ಕೆ ಉತ್ತರ ಕೊಟ್ಟಿದ್ದೇನೆ. ಚುನಾವಣೆ ಪ್ರಚಾರದಲ್ಲಿತೊಡಗಿಕೊಂಡಿರುವುದರಿಂದ 15 ದಿನಗಳ ಕಾಲ ಕಾಲಾವಕಾಶ ಬೇಕೆಂದು ಕೋರಿರುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದರು.

ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಾಕಾರಣ ನಮ್ಮ ಪಕ್ಷದವರನ್ನೇ ಗುರಿಯಾಗಿಸಿಕೊಂಡು ಐಟಿ ಇಲಾಖೆ ದಾಳಿ ನಡೆಸಿದ್ದರಿಂದ ಪ್ರತಿಭಟನೆ ನಡೆಸಬೇಕಾಯಿತು ಎಂದರು.

ಯೋಚಿಸಿ ಮಾತನಾಡಲಿ:
ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಸರ್ಕಾರವನ್ನು 20% ಎಂದು ಆರೋಪಿಸುತ್ತಿದ್ದಾರೆ. ಪ್ರಧಾನಿಯವರ ಬಳಿಯಲ್ಲೇ ಗುಪ್ತಚರ ಇಲಾಖೆ ಇದೆ. ಅವರಿಗೆ ಮಾಹಿತಿ ಬಂದಿರುತ್ತದೆ. ವರದಿ ಪರಿಶೀಲನೆ ಬಳಿಕವೇ ಯೋಚಿಸಿ ಮಾತನಾಡಬೇಕು. ವಿನಾಕಾರಣ ಸರ್ಕಾರದ ಮೇಲೆ ಆರೋಪ ಮಾಡುವುದು ಸಲ್ಲದು ಎಂದರು.

ಕಳೆದ ಐದು ವರ್ಷಗಳಲ್ಲಿ ಮೋದಿ ಅವರು ಭಾವನಾತ್ಮಕ ವಿಷಯ ಹೊರತುಪಡಿಸಿ ರಾಷ್ಟ್ರದ ಅಭಿವೃದ್ಧಿ ಬಗ್ಗೆ ಎಲ್ಲೂ ಮಾತನಾಡಿಲ್ಲ. ಅವರು ಮಾತಿನಿಂದಲೇ ಎಲ್ಲರನ್ನು ಮೋಡಿ ಮಾಡುತ್ತಿದ್ದಾರೆ. ರಾಹುಲ್‍ಗಾಂಧಿ ಅವರು ವೈಯನಾಡಿನಲ್ಲಿಚುನಾವಣೆ ನಿಲ್ಲುವ ಬಗ್ಗೆ ಟೀಕಿಸಿದ್ದಾರೆ. ಇಂತಹ ಹೇಳಿಕೆಗಳನ್ನು ಪ್ರಧಾನಿಯವರು ನೀಡಬಹುದೇಎಂದರು.

ಮೈತ್ರಿಅಭ್ಯರ್ಥಿ ಪರ ಒಲವು:
ಮೈಸೂರು-ಕೊಡುಗು ಲೋಕಸಭಾಕ್ಷೇತ್ರದಲ್ಲಿ ನಾನು ಹಾಗೂ ಜಿ.ಟಿ.ದೇವೆಗೌಡ ಒಟ್ಟಾಗಿ ಚುನಾವಣಾ ಪ್ರಚಾರದಲ್ಲಿತೊಡಗಿದ್ದೇವೆ. ಮೈತ್ರಿಅಭ್ಯರ್ಥಿ ಪರ ಉತ್ತಮ ಒಲವು ವ್ಯಕ್ತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಋಣ ಮುಗಿದಿದೆ:
ನನಗೂ, ಚಾಮುಂಡೇಶ್ವರಿ ಕ್ಷೇತ್ರಕ್ಕೂ ಋಣ ಮುಗಿದಿದೆ. ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರ ಚುನಾವಣೆಗೆ ನಿಲ್ಲಲ್ಲಎಂದು ಹೇಳಿದ್ದೆ. ಆದರೆ ನಾನು ಬೇರೆ ಕಡೆ ನಿಲ್ಲುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರು ಮತ್ತೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದ್ದಾರೆ.

ಮುಂದಿನ ಚುನಾವಣೆಗೆ ಇನ್ನು ನಾಲ್ಕು ವರ್ಷ ಬಾಕಿ ಇದೆ. ಮುಂದೆ ನೋಡೋಣ ಎಂದು ಅಲ್ಲಿಂದ ತೆರಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ