ಸಿ.ಎಂ.ಕುಮಾರಸ್ವಾಮಿ ಆರೋಗ್ಯವಾಗಿದ್ದಾರೆ-ಡಾ.ಸಿ.ಎನ್.ಮಂಜುನಾಥ್

ಬೆಂಗಳೂರು, ಏ.14- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಗ್ಯವಾಗಿದ್ದಾರೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.

ಕುಮಾರಸ್ವಾಮಿಯವರ ಮಧುಮೇಹ ನಿಯಂತ್ರಣದಲ್ಲಿದ್ದು, ರಕ್ತದೊತ್ತಡ ಸೇರಿದಂತೆ ಎಲ್ಲವೂ ಸಾಮಾನ್ಯವಾಗಿದೆ. ಹೀಗಾಗಿ ಅವರ ಆರೋಗ್ಯ ಚೆನ್ನಾಗಿದೆ ಎಂದು ಹೇಳಿದ್ದಾರೆ.

10 ದಿನಕ್ಕೊಮ್ಮೆ ಕುಮಾರಸ್ವಾಮಿಯವರ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತಿದ್ದು, ಯಾವುದೇ ರೀತಿಯ ತೊಂದರೆ ಕಂಡು ಬಂದಿಲ್ಲ. ಹೃದ್ರೋಗ ಶಸ್ತ್ರಚಿಕಿತ್ಸೆ ಒಳಗಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಪ್ರತಿ ವಾರ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿಯವರ ಆರೋಗ್ಯದ ಬಗ್ಗೆ ಪ್ರಸ್ತಾಪಿತವಾಗುತ್ತಿರುವ ವಿಚಾರಗಳು ಊಹಾಪೋಹಗಳಿಂದ ಕೂಡಿದೆ ಎಂದು ಹೇಳಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಹೇಳಿಕೆ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿ, ತಾವು ಆರೋಗ್ಯವಾಗಿದ್ದು, ತಮಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ತಮ್ಮ ತಾಯಿ ಹಾಗೂ ದೇವರ ಆಶೀರ್ವಾದದಿಂದ ಚೆನ್ನಾಗಿರುವುದಾಗಿ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ