ಬೆಂಗಳೂರು, ಏ.13- ರಾಜಕೀಯವಾಗಿ ನನ್ನ ನಿಲುವು ಸ್ಪಷ್ಟವಾಗಿದೆ. ರಾಜಕಾರಣದಲ್ಲಿ ಧರ್ಮವಿರಬೇಕೇ ಹೊರತು ಧರ್ಮದಲ್ಲಿ ರಾಜಕಾರಣ ಇರಬಾರದು. ನನ್ನ ಹೇಳಿಕೆಗೆ ಯಾರು ಏನು ಬೇಕಾದರೂ ಟೀಕೆ ಮಾಡಲಿ ಅದಕ್ಕೆ ನಾನು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ವ್ಯಕ್ತಿಯಾಗಿ ನನಗೆ ನನ್ನದೇ ಆದ ನಿಲುವುಗಳಿವೆ. ಅಭಿವ್ಯಕ್ತಿ ಸ್ವಾತಂತ್ರ್ಯವೂ ಇದೆ. ಹಾಗಾಗಿ ಲಿಂಗಾಯಿತ ಧರ್ಮದ ವಿಷಯವಾಗಿ ನಾನು ಹೇಳಿಕೆ ನೀಡಿದ್ದೇನೆ. ಅದನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ನನ್ನ ವಿರುದ್ಧ ಟೀಕೆ ಮಾಡುತ್ತಿರುವ ಎಲ್ಲರೂ ನನ್ನ ಅಣ್ಣತಮ್ಮಂದಿರು. ಹಿರಿಯ ನಾಯಕರು. ನಾನು ಅವರ ಶಿಷ್ಯನಿದ್ದಂತೆ ಎಂದು ಎಂ.ಬಿ.ಪಾಟೀಲ್ ಅವರಿಗೆ ತಿರುಗೇಟು ನೀಡಿದರು.
ನನ್ನ ವಿರುದ್ಧ ರಾಹುಲ್‍ಗಾಂಧಿ ಅವರಿಗೂ ದೂರು ನೀಡಲಿ, ಏನು ಬೇಕಾದರೂ ಟೀಕೆ ಮಾಡಲಿ. ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಯಾರ ವ್ಯವಹಾರದಲ್ಲೂ ಮೂಗು ತೂರಿಸುವುದಿಲ್ಲ. ಮೂಗು ಚುಚ್ಚುವ ಅಭ್ಯಾಸವೂ ನನಗಿಲ್ಲ ಎಂದರು.
ಪಕ್ಷದಲ್ಲಿ ಶಿಸ್ತು ಬಹಳ ಮುಖ್ಯ.ಪಕ್ಷ ಹೇಳಿದಂತೆ ನಾನು ನಡೆದುಕೊಳ್ಳುತ್ತೇನೆ. ನನ್ನ ಅಭಿಪ್ರಾಯಗಳನ್ನು ಹೇಳಲು ನನಗೆ ಸ್ವಾತಂತ್ರ್ಯವಿದೆ. ಎಂ.ಬಿ.ಪಾಟೀಲ್ ಈ ಬಗ್ಗೆ ಏಕ ವಚದಲ್ಲಾದರೂ ಮಾತನಾಡಲಿ. ಬಹುವಚನದಲ್ಲಾದರೂ ಮಾತನಾಡಲಿ. ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ. ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಹೆಚ್ಚು ಶಾಸಕರನ್ನು ಗೆಲ್ಲಿಸಿಕೊಂಡು ಬರುವ ಸಾಮಥ್ರ್ಯ ನನಗಿಲ್ಲ ಎಂದು ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ಹೇಳಿದರು.