ನಾವು ಕುಟುಂಬ ರಾಜಕಾರಣವನ್ನೇ ವಿರೋಧಿಸುತ್ತೇವೆ-ಬಿ.ಎಲ್.ಸಂತೋಷ್

ಬೆಂಗಳೂರು,ಏ.11- ಬಿಜೆಪಿಯಲ್ಲಿ ಜೀನ್ ನೋಡಿಕೊಂಡು ಟಿಕೆಟ್ ನೀಡುವ ಪರಿಪಾಠವಿಲ್ಲ. ಅನಂತಕುಮಾರ್ ಬಗ್ಗೆ ವೈಯಕ್ತಿಕವಾಗಿ ಸಾಕಷ್ಟು ಗೌರವವಿದೆ. ಅದೇ ಕಾರಣಕ್ಕೆ ತೇಜಸ್ವಿನಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದ್ದಾರೆ.

ಚಾಮರಾಜನಗರದಲ್ಲಿ ನಡೆದ ಪ್ರಬುದ್ಧರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಎಂದಿಗೂ ವಂಶ ಪಾರಂಪರ್ಯ ರಾಜಕಾರಣಕ್ಕೆ ಮಣೆ ಹಾಕುವುದಿಲ್ಲ.ನಾವು ಕುಟುಂಬ ರಾಜಕಾರಣವನ್ನೇ ವಿರೋಧಿಸುತ್ತೇವೆ. ಇದು ನನ್ನನ್ನು ಸೇರಿದಂತೆ ಎಲ್ಲರಿಗೂ ಅನ್ವಯವಾಗುತ್ತದೆ ಎಂದು ಹೇಳಿದರು.

ಅನಂತಕುಮಾರ್‍ಗೆ ಸಂಘಟನೆಯಲ್ಲಿ ಸಾಕಷ್ಟು ಗೌರವವಿತ್ತು. ಅವರು ಪಕ್ಷದ ಶಿಸ್ತಿನ ಸಿಪಾಯಿ. ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿರುವವರಲ್ಲಿ ಅವರು ಕೂಡ ಒಬ್ಬರು ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಅದೇ ಆಧಾರವಾಗಿಟ್ಟುಕೊಂಡು ಲೋಕಸಭೆ ಚುನಾವಣೆಯಲ್ಲಿ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್‍ಗೆ ಟಿಕೆಟ್ ಕೊಡಬೇಕೆಂಬುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಕಾಲ ಬದಲಾದಂತೆ ನಾವು ಹೊಸ ಹೊಸ ಪ್ರಯೋಗಗಳನ್ನು ಮಾಡಲೇಬೇಕಾಗುತ್ತದೆ.ಕುಟುಂಬದವರಿಗೆ ಮಣೆ ಹಾಕುತ್ತಾ ಬಂದರೆ ಎರಡು ಮತ್ತು ಮೂರನೇ ಹಂತದ ನಾಯಕರನ್ನು ಬೆಳೆಸುವುದಾದರೂ ಹೇಗೆ?ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ತೇಜಸ್ವಿ ಸೂರ್ಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಸ್ಪರ್ಧಿಸಿದ್ದಾರೆ.ಇಡೀ ಪಕ್ಷ ಅವರನ್ನು ಗೆಲ್ಲಿಸಲು ಮುಂದಾಗಿದೆ ಎಂದು ಹೇಳಿದರು.

ತೇಜಸ್ವಿನಿ ಅವರಿಗೆ ಟಿಕೆಟ್ ಕೊಡಬೇಕೆಂದು ಪಕ್ಷದಲ್ಲಿ ಮೊದಲು ತೀರ್ಮಾನವಾಗಿತ್ತು. ಹೈಕಮಾಂಡ್ ಕೂಡ ಮೊದಲು ಇದಕ್ಕೆ ಸಮ್ಮತಿಸಿತ್ತು. ನಮಗೆ 2ನೇ ಮತ್ತು 3ನೇ ಹಂತದ ನಾಯಕರ ಅಗತ್ಯವಿರುವುದರಿಂದ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿದ್ದೇವೆ. ಹಾಗಂದ ಮಾತ್ರಕ್ಕೆ ತೇಜಸ್ವಿನಿ ಅವರಿಗೆ ಅನ್ಯಾಯ ಮಾಡಿದಂತೆ ಆಗುವುದಿಲ್ಲ. ಕುಟುಂಬದವರನ್ನೇ ಬೆಳೆಸುತ್ತಾ ಹೋದರೆ ಇತರೆ ಪಕ್ಷಗಳಿಗೂ ತಮಗೂ ಏನು ವ್ಯತ್ಯಾಸ ಇದೆ ಎಂದು ಸಂತೋಷ್ ಪ್ರಶ್ನಿಸಿದ್ದಾರೆ.

ಬಿಎಸ್‍ವೈ ಬಗ್ಗೆ ಗೌರವವಿದೆ:

ನನಗೆ ಯಡಿಯೂರಪ್ಪನವರ ಬಗ್ಗೆ ವೈಯಕ್ತಿಕವಾಗಿ ಸಾಕಷ್ಟು ಗೌರವವಿದೆ. ಕರ್ನಾಟಕದಲ್ಲಿ ಅವರೊಬ್ಬ ಪ್ರಭಾವಿ ಜನನಾಯಕ ಎಂಬುದರಲ್ಲಿ ಸಂದೇಹವಿಲ್ಲ.

ಎಂದಿಗೂ ನಾನು ಅವರ ಬಗ್ಗೆ ಅಗೌರವವಾಗಿ ನಡೆದುಕೊಂಡಿಲ್ಲ. ನಮ್ಮ ಅವರ ನಡುವಿನ ಸಂಬಂಧ ಹಲವಾರು ವರ್ಷಗಳಿಂದಲೂ ಉತ್ತಮವಾಗಿದೆ ಎಂದು ಹೇಳಿದರು.

ನಾನು ಯಾರೊಬ್ಬರಿಗೂ ಟಿಕೆಟ್ ಕೊಡುವುದಾಗಲಿ ಇಲ್ಲವೇ ಟಿಕೆಟ್ ಕೈ ತಪ್ಪಿಸುವಷ್ಟು ಪ್ರಭಾವನ್ನು ಹೊಂದಿಲ್ಲ. ಅವರವರ ಪರಿಶ್ರಮಕ್ಕೆ ತಕ್ಕಂತೆ ಪಕ್ಷ ಸೂಕ್ತ ಸ್ಥಾನಮಾನ ಕೊಡುತ್ತದೆ ಎಂದು ಸೂಚ್ಯವಾಗಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ