ಬೆಂಗಳೂರು, ಏ.11- ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗಿಂತ ಉತ್ತಮ ಆಯ್ಕೆ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಅಭಿಪ್ರಾಯಪಟ್ಟರು.
ಬೆಂಗಳೂರು ಪ್ರೆಸ್‍ಕ್ಲಬ್ ಹಾಗೂ ವರದಿಗಾರರ ಕೂಟ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಅನುಭವ, ವಿಚಾರ ಲಹರಿ ಸೇರಿದಂತೆ ಎಲ್ಲಾ ವಿಷಯಗಳಲ್ಲೂ ಸುಮಲತಾ ಅವರು ನಿಖಿಲ್‍ಗಿಂತಲೂ ಉತ್ತಮ ಅಭ್ಯರ್ಥಿ.ನಾನು ಕುಟುಂಬ ರಾಜಕಾರಣವನ್ನು ವಿರೋಧಿಸುವುದಿಲ್ಲ. ಅರ್ಹತೆ ಇದ್ದರೆ ಕುಟುಂಬ ರಾಜಕಾರಣ ತಪ್ಪಲ್ಲ ಎಂದು ಹೇಳಿದರು.
ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುವುದು ನನಗೆ ಇಷ್ಟವಿಲ್ಲ. ವೈಯಕ್ತಿಕವಾಗಿ ಅವರ ಮೇಲೆ ಯಾವುದೇ ದ್ವೇಷವಿಲ್ಲ. ಆದರೆ, ಅವರ ವಿಚಾರಗಳು ಸರಿಯಿಲ್ಲ ಎಂದರು.
ನಾನು ಎಂದೂ ಕೂಡ ಹಿಂದೂ ಧರ್ಮದ ವಿರೋಧಿಯಲ್ಲ. ಧರ್ಮಾಧಾರಿ ರಾಜಕಾರಣ ನಾನೆಂದೂ ಮಾಡಿಲ್ಲ. ಹಿಂದೂ ಧರ್ಮದ ವಿಚಾರವಾಗಿ ನಾನೆಂದೂ ಮಾತನಾಡಿಲ್ಲ ಎಂದು ಹೇಳಿದರು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ನಾನು ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ.ಗೆದ್ದರೆ ಕೆಲಸ ಮಾಡುತ್ತೇನೆ. ಗೆಲ್ಲದೇ ಇದ್ದರೆ ಮುಂದಿನ 15 ವರ್ಷ ಸಾರ್ವಜನಿಕ ಜೀವನದಲ್ಲಿದ್ದುಕೊಂಡು ಕೆಲಸ ಮಾಡಿಸುತ್ತೇನೆ ಎಂದರು.
ನನಗೀಗ 55 ವರ್ಷ. ಮುಂದಿನ 15 ವರ್ಷದವರೆಗೂ ರಾಜಕೀಯ ಜೀವನದಲ್ಲಿ ಇರುತ್ತೇನೆ. ಅನಂತರ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಪುಸ್ತಕ ಓದುವುದು, ಕೃಷಿ ಮಾಡಿಕೊಂಡು ವಿಶ್ರಾಂತಿಯ ಜೀವನ ನಡೆಸುತ್ತೇನೆ ಎಂದು ಹೇಳಿದರು.
ಇನ್ನು ಮುಂದೆ ಚಲನಚಿತ್ರ ರಂಗದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದಿಲ್ಲ. ಉತ್ತಮ ಅವಕಾಶಗಳು ಬಂದರೆ ಒಂದೆರಡು ಚಿತ್ರಗಳನ್ನು ಒಪ್ಪಿಕೊಳ್ಳುತ್ತೇನೆ. ಮೊದಲಿನಂತೆ ವರ್ಷದ 365 ದಿನವೂ ಚಿತ್ರೀಕರಣದಲ್ಲಿ ತೊಡಗಿಕೊಳ್ಳುವುದಿಲ್ಲ. ಹಳೇ ಶೈಲಿಯಲ್ಲಿ ನಟನೆ ಮಾಡಲು ಸಾಧ್ಯವಿಲ್ಲ. ನಾನೀಗ ಪ್ರಬುದ್ಧನಾಗಿದ್ದೇನೆ. ಬಾಲಿಶವಾದ ಪಾತ್ರಗಳನ್ನು ಮಾಡಲು ಸಾಧ್ಯವಿಲ್ಲ ಎಂದರು.
ನನ್ನ ಸ್ಪರ್ಧೆಯಿಂದ ಬಿಜೆಪಿಗೆ ಲಾಭವಾಗುತ್ತದೆ ಎಂಬ ಲೆಕ್ಕಾಚಾರವನ್ನು ನಾನು ಒಪ್ಪುವುದಿಲ್ಲ. ಪರ್ಯಾಯ ರಾಜಕಾರಣಕ್ಕಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಶಿಕ್ಷಣ, ಪರಿಸರ, ಆರೋಗ್ಯ, ಅಂತರ್ಜಲ ಅಭಿವೃದ್ಧಿ , ಜನಸಾಮಾನ್ಯರ ಸಮಸ್ಯೆಗಳು ನನ್ನ ಚರ್ಚೆಯ ವಿಷಯವಾಗಿದೆ. ರಾಜಕಾರಣದ ಬಗ್ಗೆ ನಂಬಿಕೆ ಇಲ್ಲ. ಯಾವುದೇ ರಾಜಕೀಯ ಪಕ್ಷಗಳಿಗೆ ಸ್ಪಷ್ಟ ಸಿದ್ಧಾಂತವೇ ಇಲ್ಲ. ರಾಜಕೀಯ ಪಕ್ಷಗಳು ಗೆಲ್ಲಬೇಕಾದರೆ ಶೇ.36ರಿಂದ 40ರಷ್ಟು ಮತಗಳಿಸುತ್ತವೆ.
ಅದರಲ್ಲಿ ಶೇ.18ರಿಂದ 20ರಷ್ಟು ಮತಗಳನ್ನು ಹಣ ಕೊಟ್ಟು ಖರೀದಿ ಮಾಡಲಾಗುತ್ತದೆ. ನನಗೆ ಹಣ ಕೊಟ್ಟು ಮತ ಪಡೆಯುವ ಉದ್ದೇಶವಿಲ್ಲ. ನನ್ನ ಜತೆ ವಿವಿಧ ಸಂಘಟನೆಗಳು ಸೇರಿ 5ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಪ್ರೆಸ್‍ಕ್ಲಬ್‍ನ ಅಧ್ಯಕ್ಷ ಸದಾಶಿವ ಶೆಣೈ, ಪ್ರಧಾನಕಾರ್ಯದರ್ಶಿ ಕಿರಣ್, ವರದಿಗಾರರ ಕೂಟದ ಪ್ರಧಾನಕಾರ್ಯದರ್ಶಿ ಚಂದ್ರಶೇಖರ್ ಮತ್ತಿತರರು ಸಂವಾದದಲ್ಲಿದ್ದರು.