ನವದೆಹಲಿ/ಹೈದರಾಬಾದ್: ಪ್ರಜಾಪ್ರಭುತ್ವದ ಹಬ್ಬ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಗುರುವಾರ ವಿಧ್ಯುಕ್ತ ಚಾಲನೆ ದೊರಕಿದ್ದು, ದೇಶದ 20 ರಾಜ್ಯಗಳ 91 ಲೋಕಸಭಾ ಕ್ಷೇತ್ರಗಳಿಗೆ ಬೆಳಗ್ಗೆಯಿಂದ ಮತದಾನ ನಡೆಯುತ್ತಿದೆ. ಏತನ್ಮಧ್ಯೆ ಹಲವೆಡೆ ಘರ್ಷಣೆ, ಹೊಡೆದಾಟ ನಡೆದಿದ್ದು, ಆಂಧ್ರಪ್ರದೇಶದಲ್ಲಿ ನಡೆದ ಹೊಯ್ ಕೈಯಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಟಿಡಿಪಿ–ವೈಎಸ್ ಆರ್ ಸಿಪಿ ಕಾರ್ಯಕರ್ತರ ನಡುವೆ ಘರ್ಷಣೆ:
ಘರ್ಷಣೆಯಲ್ಲಿ ಟಿಡಿಪಿ ಕಾರ್ಯಕರ್ತ ಸಿದ್ಧಾ ಭಾಸ್ಕರ ರೆಡ್ಡಿ ಹಾಗೂ ವೈಎಸ್ ಆರ್ ಸಿಪಿಯ ಕಾರ್ಯಕರ್ತ ಪುಲ್ಲಾ ರೆಡ್ಡಿ ಸಾವನ್ನಪ್ಪಿದ್ದಾರೆ. ಅನಂತಪುರ ಜಿಲ್ಲೆಯ ಟಾಡಿಪಾತ್ರಿ ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮೀರಾಪುರಂ ಗ್ರಾಮದ ಬಳಿ ಘರ್ಷಣೆ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಮತ್ತೊಂದೆಡೆ ನರಸರಾವ್ ಪೇಟ್ ವಿಧಾನಸಭಾ ಕ್ಷೇತ್ರದಲ್ಲಿ ವೈಎಸ್ ಆರ್ ಸಿಪಿ ಅಭ್ಯರ್ಥಿ ಗೋಪಿರೆಡ್ಡಿ ಶ್ರೀನಿವಾಸ್ ರೆಡ್ಡಿ ಮೇಲೆ ಟಿಡಿಪಿ ಕಾರ್ಯಕರ್ತರು ದಾಳಿ ನಡೆಸಿದ್ದರಿಂದ ಗಾಯಗೊಂಡಿರುವ ಘಟನೆ ಗುಂಟೂರ್ ಜಿಲ್ಲೆಯಲ್ಲಿ ನಡೆದಿದೆ.
ನಮೋ ಫುಡ್ ಪ್ಯಾಕೆಟ್ ವಿತರಣೆ, ನೋಯ್ಡಾದಲ್ಲಿ ಗಲಾಟೆ:
ನೋಯ್ಡಾದ ಮತದಾನ ಕೇಂದ್ರದ ಸಿಬ್ಬಂದಿ, ಅಧಿಕಾರಿಗಳಿಗೆ ನಮೋ ಫುಡ್ ಪ್ಯಾಕೆಟ್ ಕೊಡಲು ಆದೇಶ ನೀಡಿರುವುದಕ್ಕೆ ಕೆಲವು ಸ್ಥಳೀಯರು ಹಾಗೂ ಮತದಾರರು ಪೊಲೀಸರಿಗೆ ದೂರು ನೀಡಿದ್ದರು. ಏತನ್ಮಧ್ಯೆ ಗಲಾಟೆ ನಡೆದಿದ್ದು, ಅಧಿಕಾರಿಗಳು ಕೂಡಲೇ ನಮೋ ಫುಡ್ ಪ್ಯಾಕೆಟ್ ಅನ್ನು ವಾಪಸ್ ಕಳುಹಿಸಿರುವುದಾಗಿ ವರದಿ ತಿಳಿಸಿದೆ.
ಮಹಾರಾಷ್ಟ್ರದ ಗಡ್ ಚಿರೋಲಿಯಲ್ಲಿ ನಕ್ಸಲೀಯರಿಂದ ಐಇಡಿ ಬ್ಲಾಸ್ಸ್:
ಮಹಾರಾಷ್ಟ್ರದ ಗಡ್ ಚಿರೋಲಿ ಜಿಲ್ಲೆಯಲ್ಲಿ ಮತದಾನ ನಡೆಯುತ್ತಿದ್ದ ಸಂದರ್ಭದಲ್ಲಿಯೇ ನಕ್ಸಲೀಯರು ಮತದಾನ ಕೇಂದ್ರದ ಸಮೀಪವೇ ಐಇಡಿ ಸ್ಫೋಟಿಸಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಮತದಾರರು ಲೋಕಸಭಾ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಮತ ಚಲಾಯಿಸಲು ಸಾಲಿನಲ್ಲಿ ನಿಂತಿದ್ದರು.
ಘಟನೆಯಲ್ಲಿ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.