ಅಮೇಥಿಯಿಂದ ನಾಮಪತ್ರ ಸಲ್ಲಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

ಅಮೇಥಿ, ಏ, 10-ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದು ಈಗಾಗಲೇ ಉಮೇದುವಾರಿಕೆ ಸಲ್ಲಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಬೆಳಗ್ಗೆ ಅಮೇಥಿಯ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಿನೇಷನ್ ಫೈಲ್ ಮಾಡಿದರು.

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಉತ್ತರ ಪ್ರದೇಶದ ಪೂರ್ವ ಭಾಗದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಅವರ ಪತ್ನಿ-ಉದ್ಯಮಿ ರಾಬರ್ಟ್ ವಾದ್ರಾ ಹಾಗೂ ಕಾಂಗ್ರೆಸ್ ಧುರೀಣರು ಈ ಸಂದರ್ಭದಲ್ಲಿ ರಾಹುಲ್ ಜೊತೆಗಿದ್ದರು.

ರಾಹುಲ್ ನಾಮಪತ್ರ ಸಲ್ಲಿಕೆಯೊಂದಿಗೆ ಅಮೇಥಿಯಲ್ಲಿ ಚುವಾವಣಾ ಕಣ ರಣರಂಗವಾಗಿದೆ. ಕೇಂದ್ರದ ಜವಳಿ ಸಚಿವೆ ಸ್ಮೃತಿ ಇರಾನಿ ವಿರುದ್ಧ ಈ ಬಾರಿಯೂ ರಾಹುಲ್ ಸೆಣಸಲಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪ್ರತಿಷ್ಠೆಯ ನೇರ ಸಮರ ಏರ್ಪಟ್ಟಿದೆ.ಮೇ 6ರಂದು ಐದನೇ ಹಂತದಲ್ಲಿ ಇಲ್ಲಿ ಮತದಾನ ನಡೆಯಲಿದೆ.
ಅಮೇಥಿ ಕ್ಷೇತ್ರದಿಂದ ರಾಹುಲ್ ಮೂರು ಬಾರಿ ಗೆಲುವು ಸಾಧಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ಅಮೇಥಿಯಲ್ಲಿ ಅಸಂಖ್ಯಾತ ಕಾರ್ಯಕರ್ತರೊಂದಿಗೆ ಅಬ್ಬರದ ರೋಡ್ ಶೋ ನಡೆಸಿದ ರಾಹುಲ್ ಕಾಂಗ್ರೆಸ್ ಶಕ್ತಿ ಪ್ರದರ್ಶಿಸಿದರು.

ತೆರೆದ ಟ್ರಕ್‍ನಲ್ಲಿ ಪ್ರಿಯಾಂಕಾ, ವಾಧ್ರಾ ಮತ್ತು ಅವರಿಬ್ಬರು ಮಕ್ಕಳೊಂದಿಗೆ ಮೆರವಣಿಗೆ ಮೂಲಕ ಸಾಗಿದರು.

ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಅವರು ಎಂದಿನಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ