ಬೆಂಗಳೂರು, ಏ.9-ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ, ಪ್ರಜಾಪ್ರಭುತ್ವದ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೃಷ್ಣಭೈರೇಗೌಡ ವಾಗ್ದಾಳಿ ನಡೆಸಿದರು.
ಬ್ಯಾಟರಾಯನಪುರದಲ್ಲಿ ಚುನಾವಣಾ ಪ್ರಚಾರ ನಡೆಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಲ್ವಾಮಾದಲ್ಲಿ ಯುದ್ಧದಲ್ಲಿ 44 ಯೋಧರು ಹುತಾತ್ಮರಾಗಲಿಲ್ಲ. ಅವರು ಪ್ರಯಾಣಿಸುತ್ತಿದ್ದ ವೇಳೆ ಬಾಂಬ್ ಬ್ಲಾಸ್ಟ್ ಆಗಿದೆ.ದೇಶದಲ್ಲಿ ಇಂಟೆಲಿಜೆನ್ಸ್ ಇರಲಿಲ್ಲವೇ, ಈ ದಾಳಿ ಮೊದಲೇ ಗೊತ್ತಾಗಲಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.
ಪುಲ್ವಾಮಾದಲ್ಲಿ 300 ಕೆಜಿ ಆರ್ಡಿಎಕ್ಸ್ ಪತ್ತೆ ಮಾಡಲಾಗಲಿಲ್ಲ ಎಂದರೆ ಏನರ್ಥ?ಅನಗತ್ಯವಾಗಿ ಯೋಧರ ಸಾವಿಗೆ ಕಾರಣರಾದಂತಾಯಿತಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಚುನಾವಣೆಯಲ್ಲಿ ಗೆದ್ದು ಸಂಸದನಾದರೂ ನಾನು ಕ್ಷೇತ್ರದ ಜನರ ಋಣವನ್ನು ತೀರಿಸುತ್ತೇನೆ ಎಂದು ಭರವಸೆ ನೀಡಿದರು.
ಕ್ಷೇತ್ರದಲ್ಲಿ ಕಾರ್ಪೊರೇಟರ್ ಇಲ್ಲ, ಶಾಸಕರಿಲ್ಲ ಎಂದು ಯಾರೂ ಬೇಸರಪಟ್ಟುಕೊಳ್ಳಬೇಡಿ.ಎಲ್ಲವೂ ನಾನೇ ಸಂಸದನಾದ ನಂತರವೂ ಇಲ್ಲಿನ ಜನರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಪಡುತ್ತೇನೆ ಎಂದು ತಿಳಿಸಿದರು.
ನನ್ನದು ಅದೇ ಹಳೇ ಕಚೇರಿ, ಅದೇ ಕುರ್ಚಿ, ಅದೇ ಮೇಜು. ನಾನು ಅಲ್ಲೇ ಇರುತ್ತೇನೆ. ಪಕ್ಷಭೇದವಿಲ್ಲದೆ ಏನೇ ಸಮಸ್ಯೆ ಇದ್ದರೂ ಎಲ್ಲರೂ ನನ್ನನ್ನು ಭೇಟಿಯಾಗಬಹುದು ಎಂದು ಕರೆ ನೀಡಿದರು.