ಬೀದರ್: ನಿನ್ನೆ ನಡೆದ ದಿಢೀರ ಬೆಳವಣಿಗೆಯಲ್ಲಿ ಭಾಲ್ಕಿ ವಿಧಾನಸಭಾ ಕ್ಷೇತ್ರದ ನೂರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಬೀದರ್ ಲೋಕಸಭಾ ಕ್ಷೇತ್ರದ ಈಶ್ವರ್ ಖಂಡ್ರೆಯವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮೂಲಕ ಜಿಲ್ಲಾ ಬಿಜೆಪಿಗೆ ಶಾಕ್ ನೀಡಿದ್ದಾರೆ.
ಶನಿವಾರ ಭಾಲ್ಕಿಯಲ್ಲಿ ನಡೆದ ಸಭೆಯಲ್ಲಿ ತಾಲೂಕಿನ ಪ್ರಕಾಶ್ ಪಾಟೀಲ್ ಮೊತಕ್ಪಲ್ಲಿ, ಅಶೋಕ್ ಮಡ್ಡೆ, ಓಂಕಾರ್ ಚಿಲಶೆಟ್ಟಿ, ಮಾಜಿ ತಾ.ಪಂ.ಅಧ್ಯಕ್ಷರಾದ ಅಂಬಣ್ಣ ವಾಗ್ದಲೆ ರಾಜು ಪಾಟೀಲ್ ನಿತ್ತೂರು ಸೇರಿದಂತೆ ನೂರಾರು ಬಿಜೆಪಿಯ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಇದೇ ಸಂದರ್ಭದಲ್ಲಿ ಎಲ್ಲಾ ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡ ಕೆ.ಪಿ.ಸಿ.ಸಿ ಕಾರ್ಯಧ್ಯಕ್ಷರು ಹಾಗೂ ಶಾಸಕರಾದ ಈಶ್ವರ್ ಖಂಡ್ರೆ ಮಾತನಾಡಿ ತಾವು ಸಚಿವರಾಗಿದ್ದಾಗ ಸುಮಾರು 2000 ಕೋಟಿ ಅನುದಾನವನ್ನು ತಂದು ಭಾಲ್ಕಿ ತಾಲೂಕು ಹಾಗೂ ಬೀದರ್ ಜಿಲ್ಲೆಯಲ್ಲಿ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದೇನೆ.ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ, ಎಫ್ ಎಮ್ ರೇಡಿಯೋ ಸೇರಿದಂತೆ ಯೋಜನೆಗಳನ್ನು ತರುವ ಮೂಲಕ ಬೀದರ್ ಜಿಲ್ಲೆಯ ಸರ್ವಾಂಗೀಣ ಪ್ರಗತಿಗಾಗಿ ಶ್ರಮಿಸುವುದಾಗಿ ತಿಳಿಸಿದ್ರು. ಕಾಂಗ್ರೆಸ್ ಪಕ್ಷವು ಸರ್ವ ಜನರ ಹಿತಕ್ಕಾಗಿ ಶ್ರಮಿಸುವ ಪಕ್ಷವಾಗಿದ್ದು, ಪಕ್ಷಕ್ಕಾಗಿ ದುಡಿಯುವವರಿಗೆ ಖಂಡಿತವಾಗಿ ನ್ಯಾಯ ದೊರೆಯುತ್ತದೆ ಎಂದು ಹೇಳಿದರು.
ತಾವೆಲ್ಲರೂ ಈ ಇಂದಿನಿಂದ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಗೆಲುವಿಗಾಗಿ ಶ್ರಮಿಸಿಬೇಕೇಂದು ಕರೆ ನೀಡಿದರು. ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಪ್ರಕಾಶ್ ಮಾಶೆಟ್ಟಿ ಕಳೆದ ಮೂರು ದಶಕದಿಂದ ವರ್ಷಗಳಿಂದ ಬಿಜೆಪಿ ಪಕ್ಷದ ಬಲವರ್ಧನೆಗಾಗಿ ಸಾಕಷ್ಟು ಕೆಲಸಗಳನ್ನು ನಿರ್ವಹಿದರೂ ಸಹ ಬಿಜೆಪಿ ಪಕ್ಷದ ಮುಖಂಡರು ಮೂಲ ಕಾರ್ಯಕರ್ತರನ್ನು ಗುರುತಿಸುತ್ತಿಲ್ಲ ಹಾಗೂ ಪಕ್ಷದಲ್ಲಿ ಕೆಲವರಿಗೆ ಮಾತ್ರ ಸ್ಥಾನಮಾನಗಳನ್ನು ಸಿಗುತ್ತಿವೆ. ಭಗವಂತ ಖೂಬಾ ಬೀದರ್ ಜಿಲ್ಲೆಯ ಸಂಸದರಾಗಿ ಜಿಲ್ಲೆಯ ಪ್ರಗತಿಯನ್ನು ಮಾಡಿಲ್ಲ.
ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಈ ಬಾರಿ ಈಶ್ವರ್ ಖಂಡ್ರೆಯವರ ಕೈಬಲಡಿಸುವ ಸಲುವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇವೆ ಎಂದು ಪ್ರಕಾಶ್ ಮಾಶೆಟ್ಟಿ ಹೇಳಿದ್ರು.
ಇದೇ ಸಂದರ್ಭದಲ್ಲಿ ಭಾಲ್ಕಿ ತಾಲೂಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹನುಮಂತ ಚೌಹಾಣ, ಅಶೋಕ್ ಮಡ್ಡೆಯವರು ಮಾತನಾಡಿದರು.ನೂರಾರು ಸಂಖ್ಯೆಯಲ್ಲಿ ಬಿಜೆಪಿಯ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮೂಲಕ ಭಾಲ್ಕಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಉತ್ಸಾಹ ಮೂಡಿದೆ.