ತುಮಕೂರು: ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮೈತ್ರಿ ಅಭ್ಯರ್ಥಿಯಾಗಿ ತುಮಕೂರಿನಿಂದ ಸ್ಪರ್ಧೆ ಮಾಡಿದ್ದಾರೆ.
ಸ್ವಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟು, ತುಮಕೂರಿಗೆ ವಲಸೆ ಬಂದಿರುವ ದೇವೇಗೌಡರಿಗೆ ಆಂತರಿಕ ಬಂಡಾಯದ ಬಿಸಿ ಕಾಡುತ್ತಿದೆ.
ದೇವೇಗೌಡರ ಸ್ಪರ್ಧೆಯಿಂದಾಗಿ ಹಾಲಿ ಸಂಸದ ಕಾಂಗ್ರೆಸ್ನ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ಸಿಗಲಿಲ್ಲ. ಇದರಿಂದ ಬಂಡಾಯವೆದ್ದ ಮುದ್ದಹನುಮೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಕೊನೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾತಿಗೆ ಒಪ್ಪಿ ಅವರು ನಾಮಪತ್ರವನ್ನೆನೋ ವಾಪಸ್ ಪಡೆದರು. ಆದರೆ ಮೈತ್ರಿ ಅಭ್ಯರ್ಥಿ ಹೆಚ್.ಡಿ ದೇವೇಗೌಡ ಪರ ಪ್ರಚಾರಕ್ಕೆ ಬಾರದೇ ದೂರವೇ ಉಳಿದಿದ್ದಾರೆ.
ಇನ್ನೊಂದೆಡೆ ಮಾಜಿ ಶಾಸಕ ಕೆ.ಎನ್ ರಾಜಣ್ಣ ಕೂಡ ಪ್ರಚಾರಕ್ಕೆ ಬಾರದೆ ಅಂತರ ಕಾಯ್ದುಕೊಂಡಿದ್ದಾರೆ. ಖುದ್ದು ದೇವೇಗೌಡರು ತುಮಕೂರು ಕ್ಷೇತ್ರದಲ್ಲಿ ಪ್ರಚಾರ ನಡೆಸಿದರೂ ಮುದ್ದಹನುಮೇಗೌಡ ಹಾಗೂ ಕೆ.ಎನ್ ರಾಜಣ್ಣ ಆ ಕಡೆ ಮುಖ ಮಾಡಿಲ್ಲ. ಮುದ್ದಹನುಮೇಗೌಡರು ತುಮಕೂರು ಕಡೆ ತಲೆಹಾಕಿಲ್ಲ, ರಾಜಣ್ಣ ಜಿಲ್ಲೆಯಲ್ಲಿ ಇದ್ದರೂ ಕೂಡ ಇದುವರೆಗೂ ಪ್ರಚಾರ ಕಣದಲ್ಲಿ ಪ್ರತ್ಯಕ್ಷವಾಗಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಡಿಸಿಎಂ ಪರಮೇಶ್ವರ್ ಹಾಗೂ ಸಚಿವ ಎಸ್ ಆರ್ ಶ್ರೀನಿವಾಸ್ ನೇತೃತ್ವದಲ್ಲಿ ಜಂಟಿ ಪ್ರಚಾರ ಸಭೆಗಳು ನಡೆದಿವೆ. ನಿನ್ನೆ ಕೂಡ ಕೊರಟಗೆರೆ ಹಾಗೂ ಮಧುಗಿರಿಯಲ್ಲಿ ಸಭೆ ನಿಗದಿಯಾಗಿತ್ತು. ಆದರೆ ಕೊರಟಗೆರೆಯಲ್ಲಿ ಸಭೆ ಮಾಡಿ ಮಧುಗಿರಿ ಸಭೆಯನ್ನು ಕಾರಣಾಂತರಗಳಿಂದ ಕೈ ಬಿಡಲಾಗಿದೆ. ಸದ್ಯ ಇದೇ ಈಗ ದೊಡ್ಡ ಮಟ್ಟಿಗೆ ಚರ್ಚೆ ಆರಂಭವಾಗಿದೆ.
ಏಳು ಕ್ಷೇತ್ರದಲ್ಲಿ ದೇವೇಗೌಡರ ಪರ ಜಂಟಿ ಪ್ರಚಾರ ಮುಗಿಸಿರುವ ಮೈತ್ರಿ ನಾಯಕರು ಮಧುಗಿರಿಯಲ್ಲಿ ಮಾತ್ರ ಮಾಡಿಲ್ಲ. ಇದಕ್ಕೆ ಮಧುಗಿರಿಯನ್ನು ಪ್ರತಿನಿಧಿಸಿದ್ದ ಮಾಜಿ ಶಾಸಕ ಕೆಎನ್ ರಾಜಣ್ಣ ಕಾರಣ ಎನ್ನಲಾಗಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಕೂಡ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಮಾಜಿ ಶಾಸಕರು ಜೊತೆಗೆ ಹಾಲಿ ಶಾಸಕರು ಭಾಗವಹಿಸಿದ್ದರೆ ಮಧುಗಿರಿಯಲ್ಲಿ ಮಾತ್ರ ಈ ಬಗ್ಗೆ ಚಕಾರವೇ ಇಲ್ಲ. ಇನ್ನೂ ಈ ಬಗ್ಗೆ ಮಾತನಾಡಿರುವ ಕೆಎನ್ ರಾಜಣ್ಣ ಅವರ ಮಗ ಹಾಗೂ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಾಜೇಂದ್ರ ಡಿಸಿಎಂ ಪರಮೇಶ್ವರ್ ಹಾಗೂ ಇನ್ನೊಂದು ಪಕ್ಷದ ಸಚಿವರ ನೇತೃತ್ವದಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಸಭೆ ನಡೆದಿದೆ. ಆದರೆ ಎರಡು ಪಕ್ಷದ ಮುಖಂಡರಿಗೆ ದೇವೇಗೌಡರನ್ನು ಗೆಲ್ಲಿಸಲು ಹೊಂದಾಣಿಕೆ ಆಗ್ತಿಲ್ಲ, ಮುದ್ದಹನುಮೇಗೌಡರನ್ನು ಕೂಡ ಜೊತೆಗೆ ಕರೆದೊಯ್ಯಬೇಕು. ಅವರು ಕಳೆದ ಬಾರಿ ಚುನಾಯಿತರಾದವರು. ಅವರನ್ನು ಮನವೊಲಿಸುವ ಕೆಲಸ ಮಾಡಬೇಕು. ಅವರನ್ನು ಬಿಟ್ಟು ಪ್ರಚಾರ ಮಾಡುವುದು ಸರಿಯಿಲ್ಲ ಎಂದಿದ್ದಾರೆ.
ಏಪ್ರಿಲ್ 8 ರಂದು ಮಧುಗಿರಿಯಲ್ಲಿ ರಾಜಣ್ಣರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸಭೆ ನಿಗದಿ ಮಾಡಲಾಗಿದೆ. ಸಭೆಯಲ್ಲಿ ಡಿಸಿಎಂ ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭಾಗವಹಿಸಲಿದ್ದಾರೆ. ಇದಕ್ಕೆ ಜೆಡಿಎಸ್ಗೆ ಆಹ್ವಾನವಿಲ್ಲ ಎಂದಿದ್ದಾರೆ. ಸದ್ಯ ಈ ಮಾತು ರಾಜಣ್ಣರಿಗೆ ಜೆಡಿಎಸ್ ಮೇಲೆ ಇರುವ ಕೋಪ ಇನ್ನೂ ಹೋಗಿಲ್ಲ ಎನ್ನಲಾಗಿದೆ. ಅಲ್ಲದೇ ಜಿಟಿ ದೇವೇಗೌಡರು ಮೈಸೂರಿನಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡಿಲ್ಲ. ಅವರಿಗೊಂದು ಕಾನೂನು, ನಮಗೊಂದು ಕಾನೂನಾ, ಜಿಟಿಡಿಯ ನಡೆಯಿಂದ ತುಮಕೂರಿನಲ್ಲೂ ಪರಿಣಾಮ ಬೀರಬಹುದು ಈ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ ಯುಗಾದಿ ಬಳಿಕ ಸಿಗಲಿದೆ ಅಂತಾ ಹೇಳಿದ್ದಾರೆ.
ಇನ್ನೂ ಬಂಡಾಯ ಬಗ್ಗೆ ಮಾತನಾಡಿರೋ ತುಮಕೂರು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಮಕೃಷ್ಣಯ್ಯ ಜಿಲ್ಲೆಯಲ್ಲಿ ಯಾವುದೇ ಗೊಂದಲಗಳಿಲ್ಲ ಇದು ಸತ್ಯಕ್ಕೆ ದೂರ.. ಬರುವ ದಿನಗಳಲ್ಲಿ ಮುದ್ದಹನುಮೇಗೌಡರು ಪ್ರಚಾರಕ್ಕೆ ಬರ್ತಾರೆ, ಸದ್ಯ ವೈಯಕ್ತಿಕ ಕೆಲಸಗಳಿರುವುದರಿಂದ ಬಂದಿಲ್ಲ, ಯಾವುದೇ ಅಸಮಾಧಾನವಿಲ್ಲ ಎಲ್ಲಾ ಸರಿಯಾಗಿದೆ ಅಂತಾ ಹೇಳಿದ್ದಾರೆ.
ಒಟ್ಟಾರೆಯಾಗಿ ಸಂಸದ ಮುದ್ದಹನುಮೇಗೌಡ ಇತ್ತ ಇದುವರೆಗೂ ತಿರುಗಿಯೂ ನೋಡಿಲ್ಲ, ಅತ್ತ ಕೆಎನ್ ರಾಜಣ್ಣ ಕೂಡ ಪತ್ತೆಯಿಲ್ಲ. ಏಪ್ರಿಲ್ 8 ಕ್ಕೆ ಮೈತ್ರಿ ಅಭ್ಯರ್ಥಿ ಬೆಂಬಲಿಸುವ ಸಲುವಾಗಿ ಕಾಂಗ್ರೆಸ್ ಒಂಟಿಯಾಗಿ ಪ್ರಚಾರ ಸಭೆ ಕರೆದಿದೆ. ಇದು ಇನ್ನೂ ಯಾವ ಮಟ್ಟಕ್ಕೆ ತಲಪಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.