ವಾಷಿಂಗ್ಟನ್: ಸುಮಾರು 2.4 ಬಿಲಿಯನ್ ಡಾಲರ್ ವೆಚ್ಚದಲ್ಲಿ 24 MH 60 ರೋಮಿಯೋ ಸೀ ಹಾಕ್ ಸಬ್ ಮೆರೀನ್ ನಿರೋಧಕ ಹೆಲಿಕಾಪ್ಟರ್ಗಳನ್ನು ಭಾರತಕ್ಕೆ ನೀಡಲು ಅಮೇರಿಕಾ ಅನುಮೋದಿಸಿದೆ ಎಂದು ಯುಎಸ್ ರಾಜ್ಯ ಇಲಾಖೆ ಮಾಹಿತಿ ನೀಡಿದೆ.
ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಈ ಹಂಟರ್ ಹೆಲಿಕಾಪ್ಟರ್ ಗಳಿಗೆ ಬೇಡಿಕೆ ಇದ್ದು, ಲಾಕ್ಹೀಡ್ ಮಾರ್ಟಿನ್ ತಯಾರಿಸಿದ ಈ ಹೆಲಿಕಾಪ್ಟರ್ಗಳು ಜಲಾಂತರ್ಗಾಮಿ ಮತ್ತು ಹಡಗುಗಳ ಮೇಲೆ ನಿಖರವಾದ ಗುರಿ ಹೊಂದಲು ಸಮರ್ಥವಾಗಿವೆ.
ಅಮೆರಿಕ ನೌಕಾಪಡೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಅತ್ಯಾಧುನಿಕ ಎಂಹೆಚ್ 60 ರೋಮಿಯೋ ಸೀ ಹಾಕ್ ಹೆಲಿಕಾಪ್ಟರ್ಗಳು ಸಾಗರ ತಳದಲ್ಲಿರುವ ಸಬ್ ಮೆರೀನ್ ಗಳನ್ನು ಗುರುತಿಸಿ ಅವುಗಳನ್ನು ಹೊಡೆದುರುಳಿಸುವ ಸಾಮರ್ಥ್ಯ, ಸಮುದ್ರದಲ್ಲಿ ರಕ್ಷಣಾ ಕಾರ್ಯಾಚರಣೆ ಹಾಗೂ ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳುವ ಸಾಮರ್ಥ್ಯ ಹೊಂದಿವೆ.
ಪ್ರಸ್ತುತ ಭಾರತೀಯ ನೌಕಾಪಡೆಯ ಬಳಿ ಇರುವ ಇಂಗ್ಲೆಡ್ ನ ಹಳೆಯ ಮಾದರಿ ಹೆಲಿಕಾಫ್ಟರ್ ಗಳಿಗೆ ಬದಲಿಯಾಗಿ ಮುಂಬರುವ ದಿನಗಳಲ್ಲಿ ನೌಕಾ ಹೆಲಿಕಾಫ್ಟರ್ ಗಳಲ್ಲೇ ಅತ್ಯಂತ ಆಧುನಿಕ ಮಾದರಿಯ MH 60 ರೋಮಿಯೋ ಹೆಲಿಕಾಪ್ಟರ್ ಗಳು ಕಾರ್ಯನಿರ್ವಹಿಸಲಿವೆ. ಈ ಬಲಿಷ್ಠ ಹೆಲಿಕಾಪ್ಟರ್ ಗಳು ಭಾರತೀಯ ನೌಕಾಪಡೆ ಸೇರ್ಪಡೆಯಾಗುವುದರಿಂದ ನೌಕಾದಳಕ್ಕೆ ಬಲತುಂಬಲಿವೆ ಎಂಬುದರಲ್ಲಿ ಸಂಶಯವಿಲ್ಲ ಎನ್ನಲಾಗಿದೆ.