ನವದೆಹಲಿ: ಲೋಕಸಭಾ ಚುನಾವಣೆಗೆ ಅಮೇಥಿ ಕ್ಷೇತ್ರದೊಂದಿಗೆ ಕೇರಳದ ವಯನಾಡ್ ನಿಂದಲೂ ಸ್ಪರ್ಧಿಸಲು ಕಾರಣ ಏನು ಎಂಬುದನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಹಿರಂಗಪಡಿಸಿದ್ದಾರೆ.
ಇಂದಿಲ್ಲಿ ಲೋಕಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ರಾಹುಲ್ ಗಾಂಧಿ, ದಕ್ಷಿಣ ಭಾರತದ ಜನರಿಗೆ ಪ್ರಧಾನಿ ಮೋದಿ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂಬ ಭಾವನೆ ಇದೆ. ದೇಶದ ಪ್ರಮುಖ ನಿರ್ಧಾರಗಳಲ್ಲಿ ದಕ್ಷಿಣ ಭಾರತದವರನ್ನು ಪರಿಗಣಿಸುತ್ತಿಲ್ಲ ಎಂಬ ಅಸಮಾಧಾನವಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಜನತೆಗೆ ನಾವು ಅವರೊಂದಿಗೆ ಇದ್ದೇವೆ ಎಂಬ ಸಂದೇಶ ರವಾನೆ ಮಾಡಲು ವಯಾನಾಡ್ ನಿಂದ ಸ್ಪರ್ಧಿಸುತ್ತಿರುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.
ಅಮೇಥಿ ಲೋಕಸಭಾ ಕ್ಷೇತ್ರವನ್ನು ಗಾಂಧಿ ಕುಟುಂಬದ ಭದ್ರಕೋಟೆ ಎಂದೇ ಪರಿಗಣಿಸಲಾಗಿದೆ. ಪ್ರಸ್ತುತ ರಾಹುಲ್ ಗಾಂಧಿ ಅಮೇಥಿ ಕ್ಷೇತ್ರದ ಸಂಸದರಾಗಿದ್ದು, ಇದೇ ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಎರಡು ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ. ಏಪ್ರಿಲ್ 4ರಂದು ಸಹೋದರಿ ಪ್ರಿಯಾಂಕ ಗಾಂಧಿ ಜೊತೆ ಕೇರಳದ ವಯನಾಡ್ ಕ್ಷೇತ್ರದಲ್ಲಿ ರಾಹುಲ್ ನಾಮಪತ್ರ ಸಲ್ಲಿಸಲಿದ್ದಾರೆ.
ಏತನ್ಮಧ್ಯೆ, ರಾಹುಲ್ ವಯನಾಡ್ ಕ್ಷೇತ್ರದ ಸ್ಪರ್ಧಿಸುತ್ತಿರುವುದಕ್ಕೆ ರಾಜಕೀಯ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹ ಬಿಜೆಪಿ ಅಭ್ಯರ್ಥಿಯಾಗಿ ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿಗೆ ಸೋಲಿನ ಭಯ ಕಾಡುತ್ತಿದೆ. ಹಾಗಾಗಿ ವಯನಾಡ್ ನಿಂದಲೂ ರಾಹುಲ್ ಸ್ಪರ್ಧೆಗಿಳಿಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ.