ಪಕ್ಷದ ಅಭ್ಯರ್ಥಿಗಳ ಪರ ಬೆಂಗಳೂರಿನಲ್ಲಿ ಅಮಿತ್ ಶಾ ರೋಡ್ ಶೋ

ಬೆಂಗಳೂರು,ಏ.1-ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಂದು ನಗರಕ್ಕೆ ಆಗಮಿಸುತ್ತಿದ್ದು, ಪಕ್ಷದ ಅಭ್ಯರ್ಥಿಗಳ ಪರ ರೋಡ್ ಶೋ ನಡೆಸಲಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಅಮಿತ್ ಷಾ ಸಂಜೆ ರೋಡ್ ಶೋ ನಡೆಸುವ ಮೂಲಕ ರಾಜ್ಯದಲ್ಲಿ ವಿದ್ಯುಕ್ತವಾಗಿ ಚುನಾವಣಾ ಅಖಾಡಕ್ಕೆ ಧುಮುಕಲಿದ್ದಾರೆ.

ಅಮಿತ್ ಷಾ ಅವರೊಂದಿಗೆ ರಾಜ್ಯ ಪ್ರಮುಖರಾದ ಆರ್.ಅಶೋಕ್, ವಿ.ಸೋಮಣ್ಣ, ಬಿಜೆಪಿ ನಾಯಕರಾದ ಆರ್. ಅಶೋಕ್, ವಿ.ಸೋಮಣ್ಣ, ಸತೀಶ್ ರೆಡ್ಡಿ, ರವಿಸುಬ್ರಮಣ್ಯ, ಉದಯ್ ಗರುಡಾಚಾರ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಅಮಿತ್ ಶಾಗೆ ಸಾಥ್ ನೀಡಲಿದ್ದಾರೆ.

ತೇಜಸ್ವಿ ಸೂರ್ಯ ಪರ ಅಮಿತ್ ಷಾ ಮತಯಾಚನೆ ಮಾಡಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ದಿ.ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಆಗಮಿಸಲಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ತೇಜಸ್ವಿನಿ ಅನಂತಕುಮಾರ್ ಅವರ ಮನವೊಲಿಸಲು ಪಕ್ಷದಲ್ಲಿ ಸಂಧಾನ ನಡೆಯುತ್ತಿದೆಯಾದರೂ ಅವರ ನಡೆ ಏನೆಂಬುದು ಕುತೂಹಲಕಾರಿಯಾಗಿದೆ.

ಕೊನೆ ಕ್ಷಣದಲ್ಲಿ ತಮಗೆ ಟಿಕೆಟ್ ತಪ್ಪಿಸಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿರುವುದರಿಂದ ಅವರು ಮುನಿಸಿಕೊಂಡಿದ್ದಾರೆ. ಆದರೂ ದೇಶ ಮೊದಲು ನಂತರ ನಾನು ಎಂದು ಹೇಳುತ್ತಲೇ ಇರುವ ತೇಜಸ್ವಿನಿ ತಮ್ಮ ನೋವನ್ನು ಮರೆತು ಪ್ರಚಾರಕ್ಕೆ ಧುಮುಕುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಂಜೆ 7 ಗಂಟೆಗೆ ಬನಶಂಕರಿ ದೇವಸ್ಥಾನದಿಂದ ಆರಂಭವಾಗಲಿರುವ ರೋಡ್ ಶೋ ಸಿಂಧೂರ ಕಲ್ಯಾಣ ಮಂಟಪ, ಜೆಪಿನಗರ 6ನೇ ಹಂತ, ಮೊದಲ ಹಂತ, ಸಾರಕ್ಕಿ ಸೇರಿದಂತೆ ಒಟ್ಟು 45 ನಿಮಿಷಗಳ ಕಾಲ ರೋಡ್ ಶೋ ನಡೆಯಲಿದೆ.

ರಾಷ್ಟ್ರೀಯ ಅಧ್ಯಕ್ಷರೇ ಆಗಮಿಸುತ್ತಿರುವುದರಿಂದ ಸುಮಾರು 20 ಸಾವಿರಕ್ಕೂ ಹೆಚ್ಚು ಬೆಂಬಲಿಗರು ಜಮಾವಣೆಗೊಳ್ಳುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ