ಬೆಂಗಳೂರು,ಏ.2- ಮಹಿಳೆಯರ ಮತದಾನಕ್ಕೆ ಪ್ರೋತ್ಸಾಹಿಸುವ ಉದ್ದೇಶದಿಂದ ನಗರದ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 240 ಸಖಿ ಬೂತ್ಗಳನ್ನು ಸ್ಥಾಪನೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಇಂದಿಲ್ಲಿ ತಿಳಿಸಿದರು.
ಕಬ್ಬನ್ಪಾರ್ಕ್ನಲ್ಲಿ ಸ್ಥಾಪನೆ ಮಾಡಿರುವ ಸಖಿ ಮಾದರಿ ಬೂತ್ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಕಳೆದ ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ಸೆಳೆಯುವ ಉದ್ದೇಶದಿಂದ ಪಿಂಕ್ ಬೂತ್ ನಿರ್ಮಾಣ ಮಾಡಲಾಗಿತ್ತು.ಆದರೆ ಈ ಬಾರಿ ಪಿಂಕ್ ಬದಲಿಗೆ ಸಖಿ ಬೂತ್ ಸ್ಥಾಪನೆಗೆ ಚುನಾವಣಾ ಆಯೋಗ ನೀಡಿರುವ ಸೂಚನೆಯಂತೆ ಸಖಿ ಬೂತ್ ಸ್ಥಾಪಿಸಲಾಗುತ್ತಿದೆ ಎಂದರು.
ನಗರದ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ 24 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 10 ಸಖಿ ಬೂತ್ಗಳನ್ನು ಸ್ಥಾಪಿಸುವ ಮೂಲಕ ಒಟ್ಟಾರೆ ಬಿಬಿಎಂಪಿ ವ್ಯಾಪ್ತಿಯಲ್ಲಿ 240 ಸಖಿ ಬೂತ್ ಸ್ಥಾಪನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಾಪಿಸಲಾಗುವ ಸಖಿ ಬೂತ್ಗಳಲ್ಲಿ ಮಹಿಳೆಯರು ಮತ್ತು ಪುರುಷರು ಮತದಾನ ಮಾಡಬಹುದಾಗಿದೆ ಎಂದು ಮಂಜುನಾಥ್ ಪ್ರಸಾದ್ ಹೇಳಿದರು.
ಮಹಿಳೆಯರು ಮನೆ ಬಿಟ್ಟು ಮತದಾನ ಕೇಂದ್ರಕ್ಕೆ ಬಂದು ತಮ್ಮ ಹಕ್ಕು ಚಲಾಯಿಸುವಂತೆ ಪ್ರೋತ್ಸಾಹ ದೃಷ್ಟಿಯಿಂದ ಮಹಿಳಾ ಮತದಾರರು ಹೆಚ್ಚಾಗಿರುವ ಸ್ಥಳಗಳಲ್ಲಿ ಸಖಿ ಬೂತ್ಗಳನ್ನು ಸ್ಥಾಪಿಸಲಾಗುತ್ತಿದೆ.
ಕಬ್ಬನ್ ಉದ್ಯಾನವನದಲ್ಲಿ ಸ್ಥಾಪಿಸಲಾಗಿರುವ ಮಾದರಿ ಸಖಿ ಬೂತ್ ಇಂದು ಮತ್ತು ನಾಳೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಮಹಿಳೆಯರು ಮಾದರಿ ಸಖಿ ಬೂತ್ಗೆ ಭೇಟಿ ನೀಡಿ ತಾವು ಚಲಾಯಿಸುವ ಒಂದು ಮತದ ಶಕ್ತಿ ಏನೆಂಬುದು ಅರಿತುಕೊಂಡು ಇದೇ 18ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತ ಕೇಂದ್ರಗಳಿಗೆ ಬಂದು ಮತ ಚಲಾಯಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.
ಮಾಜಿ ಮಿಸ್ ಇಂಡಿಯಾಗಳಾದ ಮಮತಾ ಕಳಮನಿ, ಪ್ರತಿಭಾ, ಪಂಚತಂತ್ರ ಚಿತ್ರದ ನಾಯಕಿ ಪಾವನ ಮತ್ತಿತರರು ಹಾಜರಿದ್ದರು.