ಬೆಂಗಳೂರು,ಏ.2- ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ಗುರುತಿನ ಚೀಟಿ ತಯಾರಿಸಲು ಕೆಲವು ಪೊಲೀಸ್ ಅಧಿಕಾರಿಗಳು ಸ್ಥಳೀಯ ಶಾಸಕರಿಗೆ ಸಹಕರಿಸುತ್ತಿದ್ದು ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕೆಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ವಿಧಾನಪರಿಷತ್‍ನ ಪ್ರತಿಪಕ್ಷದ ಉಪನಾಯಕ ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಮಾಜಿ ಉಪಮೇಯರ್ ಎಸ್.ಹರೀಶ್, ಮುಖಂಡರಾದ ವಿವೇಕ್ ರೆಡ್ಡಿ , ತುಳಸಿ ಮುನಿರಾಜುಗೌಡ, ವಿನೋದ್‍ಕುಮಾರ್, ದತ್ತಗುರು ಹೆಗಡೆ ಸೇರಿದಂತೆ ಮತ್ತಿತರರು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ಅವರನ್ನು ಭೇಟಿ ಮಾಡಿ ದೂರು ನೀಡಿದರು.
ಕೆಲವು ಪೊಲೀಸ್ ಅಧಿಕಾರಿಗಳು ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ ಅವರ ಜೊತೆ ಶಾಮೀಲಾಗಿ ನಕಲಿ ಗುರುತಿನ ಚೀಟಿ ತಯಾರಿಸಿದ್ದಾರೆ.ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯಬೇಕಾದರೆ ಕೂಡಲೇ ಇವರನ್ನು ವರ್ಗಾವಣೆ ಮಾಡಬೇಕೆಂದು ಸಂಜೀವ್‍ಕುಮಾರ್‍ಗೆ ಬಿಜೆಪಿ ನಿಯೋಗ ಮನವಿ ಮಾಡಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣಸ್ವಾಮಿ, ರಾಜರಾಜೇಶ್ವರಿನಗರದಲ್ಲಿ ಎಸಿಪಿ ರವಿಪ್ರಸಾದ್, ಇನ್‍ಸ್ಪೆಕ್ಟರ್ ಮುದ್ದುರಾಜ್, ಶಿವರೆಡ್ಡಿ ಸೇರಿದಂತೆ ಕೆಲವು ಪೊಲೀಸ್ ಅಧಿಕಾರಿಗಳು ನಕಲಿ ಗುರುತಿನ ಚೀಟಿಗೆ ಬೆಂಬಲ ನೀಡುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದರೆ ಸುಳ್ಳು ಮೊಕದ್ದಮೆ ದಾಖಲಿಸಿ ಎಫ್‍ಐಆರ್ ಹಾಕುವ ಬೆದರಿಕೆವೊಡ್ಡುತ್ತಿದ್ದಾರೆ ಎಂದು ದೂರಿದರು.
ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲೂ ಮುನಿರತ್ನ ಅವರ ಮೇಲೆ ಇಂಥದ್ದೇ ಆರೋಪ ಕೇಳಿಬಂದಿತ್ತು. ಆಯೋಗ ಮಧ್ಯಪ್ರವೇಶಿಸಿ ಪೊಲೀಸರನ್ನು ವರ್ಗಾವಣೆ ಮಾಡಿ ಬೇರೊಬ್ಬರನ್ನು ನೇಮಿಸುವಂತೆ ಕೋರಲಾಗಿತ್ತು.
ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವೂ ದೂರು:
ನಿನ್ನೆ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕೋಡಿಗೆಹಳ್ಳಿಯಲ್ಲಿ ರೈಲ್ವೆ ಅಂಡರ್‍ಪಾಸ್ ಉದ್ಘಾಟನೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕಲಾಗಿದೆ.ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಭೈರೇಗೌಡರ ಬೆಂಬಲಿಗರು ಈ ಕೃತ್ಯ ನಡೆಸಿದ್ದು, ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕ್ರಮ ಜರುಗಿಸಬೇಕೆಂದು ಮತ್ತೊಂದು ದೂರು ನೀಡಲಾಗಿದೆ.
ಫೇಸ್‍ಬುಕ್‍ನಲ್ಲಿ ಕಾಂಗ್ರೆಸ್ ಕಾಮಗಾರಿ ನಡೆಸಿದೆ ಎಂದು ಅಪಪ್ರಚಾರ ಮಾಡಲಾಗಿದೆ. ಕೃಷ್ಣಭೈರೇಗೌಡರು ಕಾಂಗ್ರೆಸ್ ಅಭ್ಯರ್ಥಿಯಾದ ಮೇಲೆ ಅಲ್ಲಿ ಅಡ್ಡ ಇದ್ದ ಕಟ್ಟಡವನ್ನು ಹೊಡೆದು ಹಾಕಿ ಇದು ಕಾಂಗ್ರೆಸ್ ಸಾಧನೆ. ಕೃಷ್ಣಭೈರೇಗೌಡರ ಪರಿಶ್ರಮದಿಂದ ಅಂಡರ್‍ಪಾಸ್ ಉದ್ಘಾಟಿಸಲಾಗಿದೆ ಎಂದು ಬಿಂಬಿಸಲಾಗಿದೆ. ಹೀಗಾಗಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಮಾಡಿದರು.
ಸ್ಥಳೀಯ ಮುಖಂಡರಾದ ವೆಂಕಟಪತಿ ಹರಿ ಹಾಗೂ ಮತ್ತಿತರರು ಈ ಕೃತ್ಯದ ಹಿಂದಿದ್ದು, ಜನರ ಮುಂದೆ ಕೃಷ್ಣಭೈರೇಗೌಡರೇ ಕೆಲಸ ಮಾಡಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇಂತಹ ಕೆಲಸ ಆಮಿಷವೊಡ್ಡುವಂತಾಗುವುದರಿಂದ ಅವರ ಮೇಲೆ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.