ಇಂದಿನಿಂದ ಸಕ್ಕರೆ ನಾಡಿನಲ್ಲಿ ಸುಮಲತಾ ಪರ ಚಾಲೆಂಜಿಂಗ್ ಸ್ಟಾರ್ ​ ಪ್ರಚಾರ; ಮೊದಲ ದಿನವೇ 28 ಹಳ್ಳಿಗಳಿಗೆ ದರ್ಶನ್​ ಭೇಟಿ

ಮಂಡ್ಯ ತೀವ್ರ ಕುತೂಹಲ ಮೂಡಿಸಿರುವ ಮಂಡ್ಯ ಲೋಕಸಭಾ ಚುನಾವಣೆ ಅಖಾಡ ಇಂದಿನಿಂದ ಮತ್ತಷ್ಟು ರಂಗೇರಲಿದೆ. ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಸುಮಲತಾ ಅಂಬರೀಶ್​ ಪರವಾಗಿ ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಇಂದಿನಿಂದ ಪ್ರಚಾರ ನಡೆಸಲಿದ್ದಾರೆ. ಮೊದಲ ದಿನವೇ ಅವರು 28 ಹಳ್ಳಿಗಳಿಗೆ ಭೇಟಿ ನೀಡುತ್ತಿರುವುದು ವಿಶೇಷ.

ಯಶ್​ ಹಾಗೂ ದರ್ಶನ್​ ಅವರು ನಟ ಅಂಬರೀಶ್​ ಅವರನ್ನು ಅಪ್ಪಾಜಿ ಎಂದು ಸ್ವೀಕರಿಸಿದ್ದರು. ಅಂಬರೀಶ್​ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಇಬ್ಬರೂ, ಎಲ್ಲ ಕೆಲಸಗಳನ್ನು ತಾವೇ ಮುಂದೆ ನಿಂತು ನಿರ್ವಹಿಸಿದ್ದರು. ಸುಮಲತಾ ಚುನಾವಣೆಗೆ ನಿಲ್ಲುತ್ತೇನೆ ಎಂದಾಗ, “ನಾವು ಸುಮಲತಾ ಮನೆ ಮಕ್ಕಳಾಗಿ ಬಂದು ಮಂಡ್ಯದಲ್ಲಿ ಪ್ರಚಾರ ಮಾಡುತ್ತೇವೆ,” ಎಂದು ಹೇಳಿದ್ದರು. ಅಂತೆಯೇ ದರ್ಶನ್​ ಇಂದಿನಿಂದ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ.

ಶ್ರೀರಂಗಪಟ್ಟಣ ಕ್ಷೇತ್ರದಿಂದ ದರ್ಶನ್ ಪ್ರಚಾರ ಪ್ರಾರಂಭಿಸಲಿದ್ದಾರೆ. ಇಂದಿನಿಂದ ಏಪ್ರಿಲ್ 16ರವರೆಗೆ ಪ್ರಚಾರ ಅವರು ಸಂಪೂರ್ಣವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ. ಮೊದಲ ದಿನ 28 ಗ್ರಾಮಗಳಲ್ಲಿ ಸುತ್ತಾಟ ನಡೆಸಿ ಪ್ರಚಾರ ನಡೆಸಲಿದ್ದಾರೆ. ಶೀಘ್ರದಲ್ಲೇ ಯಶ್​ ಕೂಡ ಇವರ ಜೊತೆ ಕೈ ಜೋಡಿಸಲಿದ್ದಾರೆ ಎನ್ನಲಾಗಿದೆ.

ಇನ್ನು, ಮಂಡ್ಯದಲ್ಲಿ ಇಂದು ‘ರಿಯಲ್ ಸ್ಟಾರ್’ ಉಪೇಂದ್ರ ಕೂಡ ಪ್ರಚಾರ ನಡೆಸಲಿದ್ದಾರೆ. ಉತ್ತಮ ಪ್ರಜಾಕೀಯ ಅಭ್ಯರ್ಥಿ ದಿವಾಕರ್ ಗೌಡ ಪರ ಉಪೇಂದ್ರ ಮತ ಕೇಳಲಿದ್ದಾರೆ. ಶಿವಪುರದ ಸತ್ಯಾಗ್ರಹ ಸೌಧದ ಬಳಿ ಪ್ರಚಾರಕ್ಕೆ ಚಾಲನೆ ನೀಡಲಾಗುತ್ತಿದೆ.

ಈ ಮೊದಲು ದರ್ಶನ್​ ಹಾಗೂ ಯಶ್​ ವಿರುದ್ಧ ಸಾಮಾಜಿ ಜಾಲತಾಣದಲ್ಲಿ ಗೋಬ್ಯಾಕ್​ ಅಭಿಯಾನ ಕೂಡ ಆರಂಭವಾಗಿತ್ತು. ಏಕಾಏಕಿಯಾಗಿ ಬಂದು ಪ್ರಚಾರ ಮಾಡಿ ನಿಖಿಲ್ ಕುಮಾರಸ್ವಾಮಿಯವರನ್ನು ಸೋಲಿಸಲು ಪ್ರಯತ್ನಿಸುವುದು ಸರಿಯಲ್ಲ. ಬೇಕಾದರೆ ಚುನಾವಣೆಗೆ ನೀವೂ ಸ್ಪರ್ಧಿಸಿ, ನಿಮಗೆ ನೀವೇ ಪ್ರಚಾರ ಮಾಡಿಕೊಳ್ಳಿ. ನೀವು ನಟರೆಂದು ನಮಗೆ ಅಭಿಮಾನವಿದೆ. ನೀವು ರಾಜಕೀಯವಾಗಿ ಪ್ರಚಾರಕ್ಕೆ ಬಂದರೆ ಅಭಿಮಾನಿಗಳಿಗೆ ಬೇಸರವಾಗುತ್ತದೆ.  ಹಾಗಾಗಿ, ಸುಮಲತಾ ಪರ ಪ್ರಚಾರ ಮಾಡಬೇಡಿ. ಒಂದು ವೇಳೆ ಪ್ರಚಾರಕ್ಕೆ ಬರೋದಾದ್ರೆ ನಿಮ್ಮ ವಿರುದ್ದ ಗೋ ಬ್ಯಾಕ್ ಚಳುವಳಿ ಮಾಡಬೇಕಾಗುತ್ತದೆ ಎಂದು ಜೆಡಿಎಸ್​ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದರು. ಇವರು ಜೋಡೆತ್ತುಗಳಲ್ಲ ಕಳ್ಳೆತ್ತುಗಳು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ