ಬೆಂಗಳೂರು, ಮಾ.31- ಲೋಕಸಭೆ ಚುನಾವಣೆಯಲ್ಲಿ ದೋಸ್ತಿ ಮಾಡಿಕೊಂಡಿರುವ ಕಾಂಗ್ರೆಸ್-ಜೆಡಿಎಸ್ಗೆ ಕೋಲಾರ, ಮಂಡ್ಯ, ಮೈಸೂರು, ಹಾಸನ ಹಾಗೂ ತುಮಕೂರು ಕ್ಷೇತ್ರಗಳು ತಲೆ ನೋವಾಗಿ ಪರಿಗಣಿಸಿವೆ.
ಹೈವೋಲ್ಟೇಜ್ ಕ್ಷೇತ್ರವೆಂದು ಪರಿಗಣಿಸಿರುವ ಮಂಡ್ಯದಲ್ಲಂತೂ ಕಾಂಗ್ರೆಸ್ ಕಾರ್ಯಕರ್ತರು ಹೊರಗೆ ಮೈತ್ರಿಗೆ ಜೈ ಎನ್ನಿತ್ತಿದ್ದು, ಒಳಗೊಳಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.
ಹಿರಿಯ ನಾಯಕರ ಗಂಭೀರ ಎಚ್ಚರಿಕೆಯನ್ನೂ ಲೆಕ್ಕಕ್ಕೆ ಇಟ್ಟುಕೊಳ್ಳದೆ ಮಂಡ್ಯದಲ್ಲಿ ಡಬ್ಬಲ್ಗೇಮ್ ರಾಜಕಾರಣ ನಡೆಯುತ್ತಿದೆ.
ಕೋಲಾರದಲ್ಲಿ ಹಾಲಿ ಸಂಸದ ಮುನಿಯಪ್ಪ ಅವರ ವಿರುದ್ಧ ಸ್ಥಳೀಯ ಶಾಸಕರು ಅಸಮಾಧಾನಗೊಂಡಿದ್ದು, ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧವಾಗಿ ಪ್ರಚಾರ ನಡೆಸುತ್ತಿದ್ದಾರೆ.
ಮುನಿಯಪ್ಪ ಅವರನ್ನು ಸೋಲಿಸಬೇಕೆಂದು ಹಠಕ್ಕೆ ಬಿದ್ದಿರುವ ಕೋಲಾರದ ಜೆಡಿಎಸ್-ಕಾಂಗ್ರೆಸ್ ನಾಯಕರು ತೆರೆಮರೆಯಲ್ಲಿ ತಮ್ಮ ಕಾರ್ಯಾಚರಣೆಗಳನ್ನು ವ್ಯಾಪಕಗೊಳಿಸಿದ್ದಾರೆ.
ಹಾಸನ ಹಾಗೂ ತುಮಕೂರಿನಲ್ಲೂ ಹೆಚ್ಚೂ ಕಡಿಮೆ ಮಂಡ್ಯದ ಪರಿಸ್ಥಿತಿಯೇ ಇದೆ. ಮೇಲ್ನೋಟಕ್ಕೆ ಮೈತ್ರಿಗೆ ಜೈ ಎನ್ನುತ್ತಿರುವ ಕಾಂಗ್ರೆಸ್ ನಾಯಕರು ಒಳಗೊಳಗೆ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ.
ತುಮಕೂರಿನಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರೇ ಖುದ್ದು ಉಸ್ತುವಾರಿ ವಹಿಸಿದ್ದರೂ ಕಾರ್ಯಕರ್ತರ ಮನವೊಲಿಸಲು ಸಾಧ್ಯವಾಗುತ್ತಿಲ್ಲ.
ಮೈಸೂರು ಕ್ಷೇತ್ರ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತರಾದ ವಿಜಯಶಂಕರ್ ಅವರನ್ನು ಗೆಲ್ಲಿಸಿಕೊಂಡು ಬರಲು ಹರಸಾಹಸ ಪಡುತ್ತಿದ್ದಾರೆ.
ಆದರೆ, ಇಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜೆಡಿಎಸ್ ನಾಯಕ ಜಿ.ಟಿ.ದೇವೇಗೌಡರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ.
ಚಾಮುಂಡೇಶ್ವರಿ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಸ್ಪರ್ಧಿಸಿ ಜಯಗಳಿಸಿದ ಜಿ.ಟಿ.ದೇವೇಗೌಡರನ್ನು ಮೈತ್ರಿ ಸರ್ಕಾರದಲ್ಲಿ ಜೆಡಿಎಸ್ ನಾಯಕರು ಸಚಿವರನ್ನಾಗಿ ಮಾಡಿದರು.
ಲೋಕಸಭೆ ಚುನಾವಣಾ ಮೈತ್ರಿಯಾದ ದಿನದಿಂದಲೂ ಜಿ.ಟಿ.ದೇವೇಗೌಡ ಅವರು ಮೈಸೂರಿನಲ್ಲಿ ಹೆಚ್ಚಾಗಿ ಕಾಣಿಸುತ್ತಿಲ್ಲ. ಅವರ ರಾಜಕೀಯ ಚಟುವಟಿಕೆಗಳು ಏನೂ ಎಂಬುದು ನಿಗೂಢವಾಗಿದೆ.