ಬೆಂಗಳೂರು, ಮಾ.30- ಲೋಕಸಭೆ ಚುನಾವಣೆಯನ್ನು ಗೆಲ್ಲಲೇ ಬೇಕೆಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಪ್ರತಿ ಕ್ಷೇತ್ರಕ್ಕೂ ಆಯಾ ಜಿಲ್ಲೆಯ ಉಸ್ತುವಾರಿ ಸಚಿವರನ್ನೇ ಜವಾಬ್ದಾರಿಯನ್ನಾಗಿ ಮಾಡಿದೆ.
ಇತ್ತೀಚೆಗೆ ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಅವರು ಸಭೆ ನಡೆಸಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದ್ದಾರೆ. ಜೆಡಿಎಸ್ನ ಅಭ್ಯರ್ಥಿಗಳಿರುವ ಕ್ಷೇತ್ರಗಳಿಗೂ ಕಾಂಗ್ರೆಸ್ ಸಚಿವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.
ಆಯಾ ಜಿಲ್ಲೆಗಳ ಸಚಿವರು ತಮ್ಮ ವ್ಯಾಪ್ತಿಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೀಡುಬಿಟ್ಟು ಕೆಲಸ ಮಾಡಬೇಕು. ಪಕ್ಷ ವಿರೋಧ ಚಟುವಟಿಕೆ ಮಾಡುವವರ ಮೇಲೆ ಹದ್ದಿನ ಕಣ್ಣಿಟ್ಟು ತಿಳುವಳಿಕೆ ನೀಡಬೇಕು. ಅದನ್ನು ಮೀರಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದರೆ ಅವರನ್ನು ಪಕ್ಷದಿಂದ ಹೊರ ಹಾಕಲು ಪಕ್ಷಕ್ಕೆ ಶಿಫಾರಸು ಮಾಡಬೇಕೆಂದು ಸೂಚಿಸಲಾಗಿದೆ.
ಚುನಾವಣಾ ಖರ್ಚು-ವೆಚ್ಚ, ಸಂಘಟನೆ, ಕಾರ್ಯಕ್ರಮ ನಿರ್ವಹಣೆ ಸೇರಿದಂತೆ ಎಲ್ಲದಕ್ಕೂ ಸಚಿವರನ್ನೇ ಜವಾಬ್ದಾರಿಯನ್ನಾಗಿ ಮಾಡಲಾಗಿದೆ. ಗೆಲ್ಲುವ ಸಾಧ್ಯತೆ ಇರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತರೆ ಅದಕ್ಕೆ ಸಚಿವರೇ ಹೊಣೆಯಾಗುತ್ತಾರೆ.
ಜೆಡಿಎಸ್-ಕಾಂಗ್ರೆಸ್ನ ಎರಡು ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣಾ ತಂತ್ರಗಾರಿಕೆ ರೂಪಿಸಬೇಕೆಂದು ಸೂಚಿಸಲಾಗಿದೆ. ಜವಾಬ್ದಾರಿ ಹಂಚಿಕೆಯ ಅಧಿಕೃತ ಪಟ್ಟಿ ಇಂದು ಪ್ರಕಟಗೊಳ್ಳಲಿದೆ.