ನೀತಿ ಸಂಹಿತೆ ಉಲ್ಲಂಘನೆ-ಜೆಡಿಎಸ್ ವಿರುದ್ಧ ದೂರು ದಾಖಲು

ಮಂಡ್ಯ,ಮಾ.27-ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಜೆಡಿಎಸ್ ವಿರುದ್ಧ 3 ಪ್ರತ್ಯೇಕ ದೂರು ದಾಖಲಾಗಿವೆ. ಜೆಡಿಎಸ್, ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ನಾಮಪತ್ರ ಸಲ್ಲಿಕೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಆರೋಪ ಕೇಳಿ ಬಂದಿತ್ತು. ಇದರಿಂದ ಎಚ್ಚೆತ್ತ ಚುನಾವಣಾಧಿಕಾರಿಗಳು ದೂರು ನೀಡಿದ್ದರು.

ದೂರಿನ ಹಿನ್ನೆಲೆಯಲ್ಲಿ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಫ್ಲೈಯಿಂಗ್ ಸ್ಕ್ವಾಡ್‍ನ ರವಿ ಎಂಬುವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಎಫ್‍ಐಆರ್ ದಾಖಲಾಗಿವೆ.

ಕಾವೇರಿ ಉದ್ಯಾನವನದಲ್ಲಿ ಸಮಾವೇಶಕ್ಕೆ ಬಂದಿದ್ದ ಕಾರ್ಯಕರ್ತರು ಹೂ ಕುಂಡಗಳು, ಹೂವಿನ ಗಿಡಗಳು, ಪೌಂಟೇನ್, ವಿದ್ಯುತ್ ಸಂಪರ್ಕಗಳು, ಲಾನ್ ತುಳಿದು ಹಾಳು ಮಾಡಿದ್ದರು.ಜೊತೆಗೆ ನಿರ್ಮಾಣ ಹಂತದಲ್ಲಿದ್ದ ತಡೆಗೋಡೆಯ ಪೋಲ್ಸ್ ಕೆಡವಿದ್ದರಿಂದ ಸುಮಾರು 8 ಲಕ್ಷ ರೂ. ಹಾನಿಯಾಗಿದೆ ಎಂದು ದೂರು ನೀಡಲಾಗಿದ್ದು, ದೂರಿನ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದೆ.

ಜಯಚಾಮರಾಜೇಂದ್ರ ವೃತ್ತದಲ್ಲಿ ಅನುಮತಿ ಪಡೆಯದೆ ಹಸಿರು, ಬಿಳಿ ಬಣ್ಣದ ಪೇಪರ್ ಚೂರುಗಳನ್ನ ಸಿಡಿಸಿ ಮನರಂಜನೆ ಹೆಸರಲ್ಲಿ ಮತದಾರರನ್ನು ಸೆಳೆಯಲು ಆಮಿಷವೊಡ್ಡಿದ್ದಾರೆ ಎಂಬ ಆರೋಪ, ಮಾ. 25 ರಂದು ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಮಧ್ಯಾಹ್ನ 2.30ರಿಂದ ಸಂಜೆ 4 ಗಂಟೆ ತನಕ ನಿಂತು ಸಂಚಾರಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಸ್ಕ್ವಾಡ್ ಸುಧಾಮ ದೂರು ನೀಡಿದ್ದರು.ಈ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ