ತುಮಕೂರು: ದೇವೇಗೌಡರಿಗೆ ತಲೆನೋವಾದ ಮುದ್ದಹನುಮೇಗೌಡ!

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಕಾಂಗ್ರೆಸ್‌ ವಿರುದ್ಧ ಹಾಲಿ ಸಂಸದ ಮುದ್ದಹನುಮೇಗೌಡ ಬಂಡಾಯವೆದ್ದು ಪಕ್ಷೇತರನಾಗಿ ಕಣಕ್ಕಿಳಿದಿರುವುದು ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ ದೇವೇಗೌಡರಿಗೆ ತಲೆನೋವಾಗಿ ಪರಿಣಮಿಸಿದೆ.

ಮುದ್ದಹನುಮೇಗೌಡರನ್ನು ಮನವೊಲಿಸಲು ಕಾಂಗ್ರೆಸ್ ನಾಯಕರು ನಾನಾ ಬಗೆಯ ಕಸರತ್ತು ನಡೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೇ ಈ ನಿಟ್ಟಿನಲ್ಲಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೆ ಮುದ್ದಹನುಮೇಗೌಡರು ಮಾತ್ರ ಯಾರ ಕರೆಯನ್ನೂ ಸ್ವೀಕರಿಸುತ್ತಿಲ್ಲ. ಇದರಿಂದ ಕಾಂಗ್ರೆಸ್‌ ವರಿಷ್ಠರ ಆತಂಕವೂ ಹೆಚ್ಚಿದೆ ಎಂದು ತಿಳಿದುಬಂದಿದೆ.

ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯಲ್ಲ ಎಂದು ಮುದ್ದಹನುಮೇಗೌಡರು ಪಟ್ಟು ಹಿಡಿದಿದ್ದಾರೆ. ಅವರು ನಾಮಪತ್ರ ವಾಪಸ್ ಪಡೆಯದಿದ್ದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ ದೇವೇಗೌಡರಿಗೆ ಸಂಕಷ್ಟ ಎದುರಾಗುವುದು ನಿಚ್ಚಳವಾಗಿದೆ. ಶತಾಯಗತಾಯ ಗೆಲುವು ಸಾಧಿಸಲೇಬೇಕೆಂದು ಪಣತೊಟ್ಟಿರುವ ಜೆಡಿಎಸ್‌ಗೆ ಇಲ್ಲಿ ಹಾಲಿ ಸಂಸದರೂ, ಕ್ರಿಯಾಶೀಲ ನಾಯಕರೆಂದು ಹೆಸರಾಗಿರುವ ಮುದ್ದಹನುಮೇಗೌಡರು ಸವಾಲಾಗಿದ್ದಾರೆ. ಹೀಗಾಗಿ ನಾಮಪತ್ರ ವಾಪಸ್ ಪಡೆಯಲು ಮುದ್ದಹನುಮೇಗೌಡರಿಗೆ ಕಾಂಗ್ರೆಸ್ ನಾಯಕರು ತೀವ್ರ ಒತ್ತಡ ಹೇರುತ್ತಿದ್ದಾರೆ.

ನಾನೂ ಅಭ್ಯರ್ಥಿ ಎಂದ ರಾಜಣ್ಣ:
ತುಮಕೂರು ಕ್ಷೇತ್ರದಿಂದ ಬಂಡಾಯ ಅಭಯ್ರಥಿಯಾಗಿ ಕಣಕ್ಕಿಳಿದಿರುವ ಇನ್ನೊಬ್ಬ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ, ತಮ್ಮ ಮೇಲೂ ನಾಮಪತ್ರ ವಾಪಸ್ ಪಡೆಯಲು ಒತ್ತಡ ಹೆಚ್ಚುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.

‘ಮುದ್ದಹನುಮೇಗೌಡರ ವಿಚಾರವಾಗಿ ನಿನ್ನೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿದ್ದೆ. ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗುತ್ತೇವೆ. ನಾಮಪತ್ರ ವಾಪಸ್ ತೆಗೆದುಕೊಳ್ಳುವಂತೆ ಒತ್ತಡ ಹೆಚ್ಚಾಗುತ್ತಿದೆ. ಎಲ್ಲವೂ ಮುದ್ದಹನುಮೇಗೌಡರ ವಿವೇಚನೆಗೆ ಬಿಟ್ಟಿದ್ದು.

ಮುದ್ದಹನುಮೇಗೌಡರು ವಾಪಸ್ ತೆಗೆದುಕೊಂಡರೆ ನಾನೂ ವಾಪಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ. ಆದರೆ ಅಂತಿಮ ನಿರ್ಣಯವಾಗಿಲ್ಲ’ ಎಂದು ಕೆ. ರಾಜಣ್ಣ ತಿಳಿಸಿದ್ದಾರೆ.

ತುಮಕೂರು ರೆಡ್ ಲೈಟ್ ಏರಿಯಾನಾ?
‘ಮುಂಬಯಿ ಥರ ಇಲ್ಲಿ ರೆಡ್ ಲೈಟ್ ಏರಿಯಾ ಇದೆಯಾ, ಯಾರ್ಯಾರೋ ಬಂದು ಹೋಗೋಕೆ?’ ಎಂದು ಪ್ರಶ್ನಿಸುವ ಮೂಲಕ ದೇವೇಗೌಡರ ಕುಟುಂಬಕ್ಕೆ ರಾಜಣ್ಣ ಟಾಂಗ್ ನೀಡಿದರು. ಹಿಂದೆ ಅನಿತಾ ಕುಮಾರಸ್ವಾಮಿ ಬಂದು ಹೋದ್ರು. ಈಗ ದೇವೇಗೌಡರು ಬರ್ತಾ ಇದ್ದಾರೆ ಎಂದು ರಾಜಣ್ಣ ಕಿಡಿಕಾರಿದರು.

ಆಪ್ತನ ಮನವೊಲಿಸಲು ಪರಮೇಶ್ವರ್ ವಿಫಲ:
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಂಡಾಯವೆದ್ದಿರುವ ಕಾಂಗ್ರೆಸ್‌ ಸಂಸದ ಮುದ್ದಹನುಮೇಗೌಡರು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರಿಗೆ ಆಪ್ತರಾಗಿದ್ದಾರೆ. ತಮ್ಮ ಆಪ್ತನಿಗೆ ಪಕ್ಷದ ಟಿಕೆಟ್ ತಪ್ಪಿರುವುದಷ್ಟೇ ಅಲ್ಲ, ಕ್ಷೇತ್ರವನ್ನೇ ಜೆಡಿಎಸ್‌ಗೆ ಬಿಟ್ಟುಕೊಡುವಂತಾಗಿರುವುದು ಸ್ವತಃ ಡಿಸಿಎಂ ಪರಮೇಶ್ವರ್ ಅವರಿಗೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಪಕ್ಷದ ಸೂಚನೆಯಂತೆ ತಮ್ಮ ಆಪ್ತ ಮುದ್ದಹನುಮೇಗೌಡರ ಕೋಪ ಶಮನಗೊಳಿಸಲು ಪ್ರಯತ್ನಿಸಿದ ಪರಮೇಶ್ವರ್ ವಿಫಲರಾದರು ಎಂದು ತಿಳಿದುಬಂದಿದೆ. ಹಲವು ಬಾರಿ‌ ಮನವೊಲಿಸಲು ಪ್ರಯತ್ನ ಮಾಡಿದ್ರೂ ಮುದ್ದಹನುಮೇಗೌಡರು ಸೊಪ್ಪು ಹಾಕಲಿಲ್ಲ ಎಂದು ತಿಳಿದುಬಂದಿದೆ.

ಸದ್ಯ ಸಿದ್ದರಾಮಯ್ಯ ಕೈಗೊಳ್ಳುವ ನಿರ್ಧಾರವನ್ನು ಅವಲಂಬಿಸಿ ಬಂಡಾಯ ಅಭ್ಯರ್ಥಿಗಳು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಮುದ್ದಹನುಮೇಗೌಡರು ಸಿದ್ದರಾಮಯ್ಯ ಮಾತೂ ಕೇಳುವ ಸ್ಥಿತಿಯಲ್ಲಿ ಇಲ್ಲ ಎಂದು ನಿಕಟವರ್ತಿಗಳು ಹೇಳುತ್ತಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ