ಭೋಪಾಲ್:ಮಾ-19: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಮಸೀದಿಯೇ ಇರಲಿಲ್ಲ. 1992ರಲ್ಲಿ ಬಲಪಂಥೀಯರು ಕೆಡವಿದ್ದ ಕಟ್ಟಡವೇ ರಾಮನ ದೇವಾಲಯವಾಗಿತ್ತು ಎಂದು ದ್ವಾರಕ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿಯವರು ಹೇಳಿದ್ದಾರೆ.
ಅಯೋಧ್ಯೆ ವಿವಾದ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಮಸೀದಿ ಅಸ್ತಿತ್ವದಲ್ಲಿಯೇ ಇರಲಿಲ್ಲ. ಕರ ಸೇವಕರು ದೇಗುಲವನ್ನು ಕೆಡವಿದ್ದರೇ ಹೊರತು, ಮಸೀದಿಯನ್ನಲ್ಲ ಎಂದು ಹೇಳಿದ್ದಾರೆ.
ವಿವಾದಿತ ಸ್ಥಳದಲ್ಲಿ ರಾಮನ ದೇಗುಲ ನಿರ್ಮಾಣ ಮಾಡದಂತೆ ನ್ಯಾಯಾಲಯ ನೀಡಿರುವ ತಡೆಯಾಜ್ಞೆಯನ್ನು ಹಿಂದಕ್ಕೆ ಪಡೆದುಕೊಂಡ ಬಳಿಕ ರಾಮನ ದೇಗುಲವನ್ನು ಮರು ನಿರ್ಮಾಣ ಮಾಡಲಾಗುತ್ತದೆ ಎಂದಿದ್ದಾರೆ.
ದೇಶದಲ್ಲಿ ಇಂದು ಭ್ರಷ್ಟಾಚಾರ ದೊಡ್ಡ ಸವಾಲಾಗಿ ಪರಿಣಮಿಸಿದೆ. ರಾಜಕಾರಣಿಗಳು ಹಾಗೂ ಗ್ರಾಮಗಳಲ್ಲಿರುವ ಪಂಚಾಯತಿ ಸದಸ್ಯರುಗಳು ದೊಡ್ಡ ದೊಡ್ಡ ಮಟ್ಟದಲ್ಲಿ ಚುನಾವಣೆಗೆ ಹಣವನ್ನು ಖರ್ಚು ಮಾಡುತ್ತಿದ್ದಾರೆ.
ಪ್ರಾಥಮಿಕ ವರದಿಯನ್ನು ಸಲ್ಲಿಸಲೂ ಕೂಡ ಪೊಲೀಸರಿಗೆ ಲಂಚವನ್ನು ನೀಡಬೇಕಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ನಾನು ಮಾತನಾಡಿದರೆ, ನಾನು ಕಾಂಗ್ರೆಸ್ ಪಕ್ಷದ ಕಡೆ ಎಂದು ಹೇಳುತ್ತಾರೆ. ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ನಾನು ಕಾಂಗ್ರೆಸ್ಸಿಗನಾಗಿದ್ದೆ. ಆಗ ಬ್ರಿಟೀಷ್ ಆಡಳಿತದ ವಿರುದ್ಧ ಕಾಂಗ್ರೆಸ್ ಮಾತ್ರವೇ ಹೋರಾಟ ಮಾಡುತ್ತಿತ್ತು. ಇಂದು ನಾನು ಧಾರ್ಮಿಕ ನಾಯಕನಾಗಿದ್ದೇನೆ. ನಾನು ಶಂಕರಾಚಾರ್ಯ. ಸನಾತನ ಧರ್ಮವನ್ನು ರಕ್ಷಣೆ ಮಾಡುವುದು ನನ್ನ ಕರ್ತವ್ಯ ಎಂದು ತಿಳಿಸಿದ್ದಾರೆ.