ನವದೆಹಲಿ, ಮಾ.19-ಭಾರತದ ಭೂಸೇನೆ, ನೌಕಾದಳ ಮತ್ತು ವಾಯುಪಡೆಯನ್ನು ಒಂದೇ ಆಡಳಿತಕ್ಕೆ ಒಳಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ.
ಈ ಮೂರು ಪಡೆಗಳ ಎಲ್ಲ ಮಾನವ ಸಂಪನ್ಮೂಲ ಮತ್ತು ಸ್ವತ್ತುಗಳು ಓರ್ವ ಥ್ರಿ-ಸ್ಟಾರ್ ಜನರಲ್ ಅವರ ಕಾರ್ಯನಿರ್ವಹಣಾ ನಿಯಂತ್ರಣದ(ಏಕ ನಾಯಕತ್ವ) ಅಡಿ ಒಳಪಡಿಸುವ ಸಮಗ್ರ ಯೋಜನೆ ಇದಾಗಿದೆ.
ಜಂಟಿ ಸಂಸ್ಥೆಗಳು ಮತ್ತು ಸ್ಥಾಪನೆಗಳಿಗಾಗಿ ಕಮ್ಯಾಂಡ್ ಮತ್ತು ನಿಯಂತ್ರಣ ನಿಯಮಗಳಿಗೆ ಈ ನಿಟ್ಟಿನಲ್ಲಿ ತಿದ್ದುಪಡಿ ಮಾಡಲು ಉದ್ದೇಶಿಸಲಾಗಿದೆ.
ಭಾರತದ ಮೂರು ರಕ್ಷಣಾ ಸೇವಾ ಸಂಸ್ಥೆಗಳಲ್ಲಿ ಪ್ರಸ್ತುತ ವಿಭಿನ್ನ ಕಾಯ್ದೆಗಳು ಮತ್ತು ನಿಯಮಗಳಿದ್ದು, ಅವುಗಳನ್ನು ಪಾಲಿಸಲಾಗುತ್ತಿದೆ. ಆದರೆ ಈಗ ಕೇಂದ್ರ ಸರ್ಕಾರವು ಹೊಸ ಶಾಸನಬದ್ಧ ನಿಯಮಗಳು ಮತ್ತು ಆದೇಶಗಳನ್ನು ಅಧಿಸೂಚನೆಗೊಳಿಸಿದೆ. ಇದರ ಅನ್ವಯ ಇತರ ಎರಡು ಸೇವೆಗಳ ಸಿಬ್ಬಂದಿ ಮೇಲೆ ಯಾವುದೇ ಒಂದು ಸೇವೆಯು ನೇರ ನಿಯಂತ್ರಣ ಸಾಧಿಸಲು ಇದರಿಂದ ಸಾಧ್ಯವಾಗಲಿದೆ ಎಂದು ಮೂಲಗಳು ಹೇಳಿವೆ.
ಈ ಹೊಸ ವ್ಯವಸ್ಥೆಯನ್ನು ವಿಶೇಷವಾಗಿ ಮಹತ್ವದ ಸೇನಾ ನೆಲೆಯಾಗಿರುವ ಅಂಡಮಾನ್ ಮತ್ತು ನಿಕೋಬಾರ್ ಕಮ್ಯಾಂಡ್(ಎಎನ್ಸಿ)ಗಾಗಿ ಅನುಷ್ಠಾನಗೊಳಿಸಲಾಗುತ್ತಿದೆ.
ಮೂರು ರಕ್ಷಣಾ ಸೇವೆಗಳನ್ನೂ ಒಬ್ಬ ಸಮರ್ಥ ತ್ರಿತಾರಾ ಜನರಲ್ ನೇತೃತ್ವದಲ್ಲಿ ಏಕ ಆಡಳಿತಕ್ಕೆ ಒಳಪಡಿಸುವ ಈ ಯೋಜನೆಗೆ ಈಗಾಗಲೇ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.