ಬೆಂಗಳೂರು, ಮಾ.25- ಕಲಬುರ್ಗಿ ಜಿಲ್ಲೆ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಶಾಸಕ ಉಮೇಶ್‍ಜಾಧವ್ ರಾಜೀನಾಮೆ ಕುರಿತು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಅವರು ಇಂದು ಐತಿಹಾಸಿಕ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದರು.
ವಿಧಾನಸೌಧದ ಮೂರನೇ ಮಹಡಿಯ ಸಮಿತಿಯ ಕೊಠಡಿಯಲ್ಲಿಂದು ಶಾಸಕ ಉಮೇಶ್‍ಜಾಧವ್ ಅವರ ವಿಚಾರಣೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಚಿಂಚೋಳಿ ಕ್ಷೇತ್ರದ ಮತದಾರರು ಕೂಡ ವಾದ ಮಂಡಿಸಲು ಸ್ಪೀಕರ್ ಅವರು ಅವಕಾಶ ನೀಡಿದ್ದರು.
ಆರಂಭದ ವಿಚಾರಣೆಯಲ್ಲಿ ಉಮೇಶ್ ಜಾಧವ್ ಅವರ ಪರ ವಕೀಲ ಸಂದೀಪ್ ಪಾಟೀಲ್ ಅವರು, ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ನೀಡಿರುವುದು ಸ್ವಯಂ ಪ್ರೇರಿತವೇ ಅಥವಾ ಇನ್ನೊಬ್ಬರ ಪ್ರೇರೇಪಣೆ ಇದೆಯೇ ಎಂಬುದಷ್ಟೇ ಸ್ಪೀಕರ್ ಅವರು ಸ್ಪಷ್ಟಪಡಿಸಿಕೊಳ್ಳಬೇಕು. ಅನಂತರ ರಾಜೀನಾಮೆ ಅಂಗೀಕಾರ ಅಥವಾ ತಿರಸ್ಕರಿಸುವ ನಿರ್ಧಾರ ತೆಗೆದುಕೊಳ್ಳಬೇಕು.
ಕಾನೂನಿನ ಪ್ರಕಾರ ರಾಜೀನಾಮೆ ನೀಡಿದ ಶಾಸಕರ ನಿರ್ಧಾರಕ್ಕೆ ಸಂಬಂಧಪಟ್ಟಂತೆ ಇನ್ನೊಬ್ಬರ ಅಭಿಪ್ರಾಯ ಕೇಳಲು ಅವಕಾಶವಿಲ್ಲ. ಏಕೆಂದರೆ ಶಾಸಕರು, ಸಭಾಧ್ಯಕ್ಷರ ಸಂಬಂಧ ಮಾಲೀಕ-ಸೇವಕನಂತಿಲ್ಲ ಎಂದು ವಾದಿಸಿದರು.
ಇದಕ್ಕೆ ಸ್ಪಷ್ಟನೆ ನೀಡಿದ ಸ್ಪೀಕರ್ ಅವರು, ಪ್ರಜಾಪ್ರಭುತ್ವದಲ್ಲಿ ಮಾತನಾಡಲು ಅವಕಾಶ ಕೊಡಬೇಕಿದೆ.ಶಾಸಕ ಉಮೇಶ್ ಜಾಧವ್ ಅವರು ರಾಜೀನಾಮೆ ನೀಡುವ ಮೊದಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಮತ್ತು ಪಕ್ಷದ ಅಧ್ಯಕ್ಷರು ನನಗೆ ಜನಪ್ರತಿನಿಧಿ ಕಾಯ್ದೆ ಷೆಡ್ಯೂಲ್ 10ರ ಅಡಿ ದೂರು ನೀಡಿದ್ದಾರೆ.ಹೀಗಾಗಿ ಅದರ ವಿಚಾರಣೆಯನ್ನೂ ನಡೆಸಬೇಕು.
ನಾನು ಯಾವುದೇ ಪೂರ್ವಾಗ್ರಹ ಪೀಡಿತನಾಗಿಲ್ಲ. ಕಾನೂನಿನಲ್ಲಿ ಜನಪ್ರತಿನಿಧಿ ಕಾಯ್ದೆ ಷೆಡ್ಯೂಲ್10ರಲ್ಲಿ ಅನರ್ಹತೆ ಮತ್ತು ಅದರ ಪ್ರಕ್ರಿಯೆಗಳ ಬಗ್ಗೆ ಸ್ಪಷ್ಟತೆ ಇಲ್ಲ. ನಾನು ವಿಧಾನಸಭೆಗೆ ಮಾತ್ರ ಅಧ್ಯಕ್ಷನಲ್ಲ. ರಾಜ್ಯದ ಜನರಿಗೂ ಉತ್ತರ ಹೇಳಬೇಕಾದವನು. ಹಾಗಾಗಿ ಕಾನೂನಿನಲ್ಲಿ ಸ್ಪಷ್ಟವಾಗಿ ಏನನ್ನೂ ಹೇಳದೇ ಇದ್ದರೂ ಸತ್ಯಸ್ಥಾಪನೆ ಸಲುವಾಗಿ ಈ ವಿಚಾರಣೆಯನ್ನು ಆಯೋಜಿಸಿದ್ದೇನೆ. ಶಾಸಕರ ಪರವಾದ ವಾದವನ್ನೂ ಕೇಳುತ್ತೇನೆ. ರಾಜೀನಾಮೆ ಕುರಿತಂತೆ ಕ್ಷೇತ್ರದ ಸಂಘ-ಸಂಸ್ಥೆಗಳು ಮತ್ತು ಮತದಾರರು ನನಗೆ ದೂರು ನೀಡಿದ್ದಾರೆ. ಅವರ ವಾದವನ್ನೂ ಕೇಳುತ್ತೇನೆ ಎಂದು ಹೇಳುವ ಮೂಲಕ ಶಾಸಕರ ಪರವಾದ ವಕೀಲರ ವಾದವನ್ನು ತಳ್ಳಿ ಹಾಕಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಪರ ವಕೀಲರಾದ ಶಶಿಕಿರಣ್ ಮಾತನಾಡಿ, ಉಮೇಶ್ ಜಾಧವ್ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಜರುಗಿಸುವಂತೆ ಫೆ.11ರಂದು ಶಾಸಕಾಂಗ ಪಕ್ಷದ ನಾಯಕರು ದೂರು ನೀಡಿದ್ದಾರೆ. ಆ ದೂರಿಗೆ ಸ್ಪಷ್ಟನೆ ನೀಡಿರುವ ಉಮೇಶ್ ಜಾಧವ್ ಅವರು, ನಾನು ಕಾಂಗ್ರೆಸ್‍ನಲ್ಲೇ ಇರುತ್ತೇನೆ ಎಂದು ಲಿಖಿತ ಹೇಳಿಕೆ ನೀಡಿದ್ದಾರೆ.ಆ ನಂತರ ಮಾ.3ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಮಾ.6ರಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಹೈಕೋರ್ಟ್ ವಿಭಾಗೀಯ ಪೀಠದ ಪ್ರಕಾರ ರಾಜೀನಾಮೆ ವಿಷಯವನ್ನು ಒಂದು ವಾರದೊಳಗೆ ಇತ್ಯರ್ಥಪಡಿಸಬೇಕು. ಆದರೆ, ಉಮೇಶ್ ಜಾಧವ್ ಅವರ ಪ್ರಕರಣದಲ್ಲಿ ರಾಜೀನಾಮೆ ಮತ್ತು ಅನರ್ಹತೆ ಈವೆರಡೂ ವಿಷಯಗಳು ಬಾಕಿ ಇವೆ.
ಶಾಸಕಾಂಗ ಪಕ್ಷದ ನಾಯಕರು ದೂರು ನೀಡಿದ ತಕ್ಷಣವೇ ಶಾಸಕರನ್ನು ಅನರ್ಹಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದರೆ ರಾಜೀನಾಮೆ ಪ್ರಶ್ನೆಯೇ ಉದ್ಬವಿಸುತ್ತಿರಲಿಲ್ಲ. ಈ ಹಂತದಲ್ಲಿ ರಾಜೀನಾಮೆ ಪ್ರಕರಣ ಮತ್ತು ಅನರ್ಹತೆ ಪ್ರಕರಣ ಈವೆರಡೂ ವಿಚಾರಣೆ ನಡೆಯುತ್ತಿದೆ.ಈ ಎರಡು ರೀತಿಯ ಆದೇಶಗಳು ಬರಬಾರದು. ಹಾಗಾಗಿ ಅನರ್ಹತೆಯ ದೂರನ್ನು ಮೊದಲು ವಿಚಾರಣೆಗೆ ಕೈಗೆತ್ತಿಕೊಳ್ಳಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಾಧವ್ ಪರ ವಕೀಲ ಸಂದೀಪ್ ಪಾಟೀಲ್ ಅವರು, ರಾಜೀನಾಮೆಯ ಮಾನದಂಡಗಳು ಸ್ಪಷ್ಟವಾಗಿವೆ. ಕಾನೂನಿನಲ್ಲಿ ಶಾಸಕರು ಸ್ವಯಿಚ್ಚೆಯಿಂದ ರಾಜೀನಾಮೆ ನೀಡಿದ್ದರೆ ಅದನ್ನು ಅಂಗೀಕರಿಸಬೇಕು. ಹೈಕೋರ್ಟ್ ತೀರ್ಪು ಕೂಡ ಇದನ್ನೇ ಪ್ರತಿಪಾದಿಸುತ್ತದೆ ಎಂದು ವಾದಿಸಿದರು.
ಈ ಹಂತದಲ್ಲಿ ಸ್ಪೀಕರ್ ಅವರು ತಮಿಳುನಾಡಿನಲ್ಲಿ ಶಾಸಕರ ವಜಾ ಪ್ರಕರಣವನ್ನು ಪ್ರಸ್ತಾಪಿಸಿದರು.ತೀರ್ಪು ಮತ್ತು ನ್ಯಾಯ ಒಂದೇ ರೀತಿ ಇರುವುದಿಲ್ಲ ಎಂದು ಹಿರಿಯರೊಬ್ಬರು ಹೇಳಿದ್ದಾರೆ. ನನಗೆ ನೈತಿಕತೆ, ಅನೈತಿಕತೆಯ ವಿಶ್ಲೇಷಣೆಗೆ ಅವಕಾಶವಿಲ್ಲ. ಸಾಕ್ಷಿಗಳ ಆಧಾರದ ಮೇಲೆ ತೀರ್ಪು ನೀಡಬೇಕಾಗುತ್ತದೆ. ಜನ ಪ್ರಾತಿನಿಧ್ಯ ಕಾಯ್ದೆಯಲ್ಲಿ ಸ್ಪಷ್ಟತೆ ಇಲ್ಲದೇ ಇರುವುದರಿಂದ ಅದರ ಲೋಪಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ನಡೆಸುತ್ತಿದ್ದೇನೆ. ನಾನು ಕಾನೂನು ಪಂಡಿತನಲ್ಲ. ಕಾನೂನು ಓದಿಲ್ಲ. ಕೋರ್ಟ್‍ನಲ್ಲಿ ವಾದ ಮಾಡಿಲ್ಲ. ಆದರೆ, ಕಾನೂನು ತಜ್ಞರ ಜತೆ ಚರ್ಚೆ ಮಾಡುತ್ತೇನೆ. ಒಂದಷ್ಟು ತಿಳಿದುಕೊಂಡಿದ್ದೇನೆ. ನಾಳೆ ಕಾನೂನು ಗೊತ್ತಿಲ್ಲದೆ ಸ್ಪೀಕರ್ ಅವರು ಯಾವುದೋ ತೀರ್ಪು ಕೊಟ್ಟರು ಎಂಬ ಮಾತುಗಳು ಬರಬಾರದು. ಹಾಗಾಗಿ ಸ್ಪಷ್ಟ ವಿಚಾರಣೆಯ ನಂತರ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.
ಜಾಧವ್ ಪರ ವಕೀಲರು ಮಾತನಾಡಿ, ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ನೀವು ಆ ವಿಷಯದಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಬದ್ಧರಾಗಿರುತ್ತಾರೆ. ಶಾಸಕಾಂಗ ಪಕ್ಷದ ನಾಯಕರು ನೀಡಿರುವ ದೂರಿನ ವಿಚಾರಣೆಯ ಮೇಲೆ ಮುಂದಿನ ದಿನಗಳಲ್ಲಿ ವಿಚಾರಣೆಯನ್ನು ಮುಂದುವರಿಸಿದರೆ ಶಾಸಕರು ಅದರಲ್ಲಿಯೂ ಭಾಗವಹಿಸುತ್ತಾರೆ ಎಂದು ಭರವಸೆ ನೀಡಿದರು.
ಈ ಹಂತದಲ್ಲಿ ಸ್ಪೀಕರ್ ಅವರು, ಜನಪ್ರತಿನಿಧಿಗಳು ನಿರ್ಲಜ್ಯರಾಗಿ ವರ್ತಿಸಿದರೆ ಪ್ರಜಾಸತಾತ್ಮಕತೆಗೆ ಒಡೆತ ಬೀಳಲಿದೆ ಎಂದು ಅಭಿಪ್ರಾಯಪಟ್ಟರಲ್ಲದೆ, ದೂರು ಆಧರಿಸಿ ಶಾಸಕರನ್ನು ನಾನು ಅನರ್ಹಗೊಳಿಸಿದರೆ ಅದು ಈಗ ಅವರಿರುವ ಶಾಸಕ ಸ್ಥಾನದ ಜವಾಬ್ದಾರಿಗೆ ಮಾತ್ರ ಅನ್ವಯಗೊಳ್ಳುತ್ತದೆ. ಅವರನ್ನು ಚುನಾವಣೆಯಿಂದ ನಿರ್ಬಂಧಿಸಲು ಸಾಧ್ಯವಿಲ್ಲ. ಆ ರೀತಿಯ ನಿರ್ಬಂಧಗೊಳ್ಳಬೇಕಾದರೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿ ಅದರ ವಿಚಾರಣೆ ನಡೆದು ಹೈಕೋರ್ಟ್‍ನ ವಿಭಾಗೀಯ ಪೀಠ ತೀರ್ಪು ನೀಡಿದರೆ ಮಾತ್ರ ಎರಡು ಅವಧಿಗೆ ಚುನಾವಣೆಯಿಂದ ಅನರ್ಹಗೊಳ್ಳಲು ಅವಕಾಶವಿದೆ. ಪಕ್ಷಾಂತರ ನಿಷೇಧ ಕಾಯ್ದೆ ಷೆಡ್ಯೂಲ್ 10ರ ಪ್ರಕಾರ ಅನರ್ಹಗೊಳಿಸಿದರೆ ಅವರು ಮುಂದೆ ನಡೆಯುವ ವಿಧಾನಸಭೆ ಉಪ ಚುನಾವಣೆಯಲ್ಲೂ ಬೇಕಾದರೂ ಸ್ಪರ್ಧಿಸಿ ಪುನರಾಯ್ಕೆಗೊಳ್ಳಬಹುದು. ಈ ಕಾಯ್ದೆ ಅತ್ಯಂತ ದುರ್ಬಲವಾಗಿದೆ. ಸಂಸತ್ ಇದನ್ನು ತಿದ್ದುಪಡಿ ಮಾಡಬೇಕು.ಈಗಿರುವ ಕಾನೂನಿನಲ್ಲಿ ನಿರ್ಧಿಷ್ಟ ಉದ್ದೇಶಗಳು ಸಫಲಗೊಳ್ಳುವುದಿಲ್ಲ ಎಂದು ನನ್ನ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿ ಲೋಕಸಭೆಗೆ ಕಳುಹಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಕ್ಷೇತ್ರದ ಮತದಾರರು ತಮ್ಮ ಅಭಿಪ್ರಾಯ ಹೇಳಲು ಅವಕಾಶ ನೀಡಿದ ಸ್ಪೀಕರ್ ಅವರು, ಅದಕ್ಕೆ ತಮ್ಮ ಉತ್ತರ ಹೇಳಲೂ ಶಾಸಕರಿಗೆ ಅವಕಾಶ ಮಾಡಿಕೊಟ್ಟರು.ನಂತರ ತಮ್ಮ ತೀರ್ಪನ್ನು ಕಾಯ್ದಿರಿಸಿರುವುದಾಗಿ ತಿಳಿಸಿದರು.