ವೇತನ, ಬೋಸನ್ ನೀಡಲು ಆಗ್ರಹಿಸಿ ಭೋರುಕಾ ನಿಗಮದ ವಿರುದ್ಧ ಕಾರ್ಮಿಕರ ಸತ್ಯಾಗ್ರಹ ಕಾರ್ಮಿಕರಿಗೆ ಅಮರೇಶ್ ಕರಡಿ ಬೆಂಬಲ

ಕೊಪ್ಪಳ ಮಾ ೨೫ : ವೇತನ ಪರಿಷ್ಕರಣೆ, ಬಾಕಿ ವೇತನ ಪಾವತಿ, ಬೋಸನ್ ನೀಡುವುದು ಮತ್ತು ಗುತ್ತಿಗೆ ಕಾರ್ಮಿಕರ ನೇಮಕಾತಿಗಾಗಿ ಆಗ್ರಹಿಸಿ ತಾಲೂಕಿನ ಹೊಸ ಬಂಡಿಹರ್ಲಾಪುರ ಗ್ರಾಮದ ಬಳಿಯ ಭೋರುಕಾ ವಿದ್ಯುತ್ ನಿಗಮದ ಕಾರ್ಮಿಕರ ಸಂಘದ ಪದಾಧಿಕಾರಿಗಳು ಕೈಗೊಂಡಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಬಿಜೆಪಿ ಮುಖಂಡ ಅಮರೇಶ್ ಕರಡಿ ಸೋಮವಾರ ಭೇಟಿ ನೀಡಿ ಪ್ರತಿಭಟನಾನಿರತ ಕಾರ್ಮಿಕರಿಗೆ ಬೆಂಬಲ ಸೂಚಿಸಿದರು.

ಈ ವೇಳೆ ಮಾತನಾಡಿದ ಅಮರೇಶ್ ಕರಡಿಯವರು, ಭೋರುಕಾ ವಿದ್ಯುತ್ ನಿಗಮದಲ್ಲಿ ಕಳೆದ ಹಲವಾರು ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ. ಅವರಿಗೆ ಕಾಲ ಕಾಲಕ್ಕೆ ಬೋನಸ್ ನೀಡದೇ ನಿರ್ಲಕ್ಷ್ಯ ಮಾಡಿದ್ದಾರೆ. ಇದು ಸಂಪೂರ್ಣ ಕಾರ್ಮಿಕ ವಿರೋಧಿ ನೀತಿಯಾಗಿದೆ. ಸತತ ಪರಿಶ್ರಮದಿಂದ ದುಡಿಯುತ್ತಿರುವ ಕಾರ್ಮಿಕರಿಗೆ ಭೋರುಕಾ ನಿಗಮದವರು ಸರಿಯಾಗಿ ವೇತನ ನೀಡಬೇಕು. ಕಾರ್ಮಿಕರಿಂದಲೇ ಎಲ್ಲಾ ಲಾಭ ಪಡೆಯುವ ನಿಗಮದವರು ಈ ರೀತಿ ಕಾರ್ಮಿಕರಿಗೆ ಅನ್ಯಾಯ ಮಾಡುವುದು ಸರಿಯಲ್ಲ. ಈ ಕಾರ್ಮಿಕರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಕೂಡಲೇ ಕಾರ್ಮಿಕರ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದರೆ ಬರುವ ದಿನಗಳಲ್ಲಿ ಬಿಜೆಪಿಯ ಕಾರ್ಮಿಕ ಘಟಕದೊಂದಿಗೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ನಂತರ ಮಾತನಾಡಿದ ಕಾರ್ಮಿಕದ ಸಂಘದ ಅಧ್ಯಕ್ಷ ಕೆ. ಪ್ರಹ್ಲಾದ ಮಾತನಾಡಿ, ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಲವು ದಿನಗಳಿಂದ ಪ್ರತಿಭಟನಾ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ. ಇದುವರೆಗೂ ಸಹ ನಿಗಮದ ಆಡಳಿತ ಮಂಡಳಿಯವರು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲು ಮುಂದಾಗಿಲ್ಲ. ದುಡಿಯುವ ಕಾರ್ಮಿಕರಿಗೆ ಈ ರೀತಿ ಅನ್ಯಾಯ ಎಸಗಲಾಗಿದೆ. ಸರಿಯಾದ ವೇತನ ಪಾವತಿಯಾಗದ ಕಾರಣ ಇಂದು ನಾವೆಲ್ಲ ನಮ್ಮಗಳ ಕುಟುಂಬದೊಂದಿಗೆ ಉಪವಾಸ ಇದ್ದು ಜೀವನ ನಡೆಸುವಂತಾಗಿದೆ. ಕೂಡಲೇ ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಚುನಾವಣೆ ಬಹಿಷ್ಕಾರ: ಮುಂದುವರೆದು ಮಾತನಾಡಿದ ಪ್ರಹ್ಲಾದ ಅವರು, ಫೆಬ್ರವರಿ ೧೪ನೇ ತಾರಿಖಿನಿಂದ ಇಲ್ಲಿ ಪ್ರತಿಭಟನೆ ಮಾಡುತ್ತಿದ್ದರೂ ಸಂಬಂಧಿಸಿದ ನಿಗಮದ ಆಡಳಿತ ಮಂಡಳಿಯಾಗಲಿ, ಜಿಲ್ಲಾಧಿಕಾರಿಗಳಾಗಲಿ, ಕಾರ್ಮಿಕ ಇಲಾಖೆ ಅಧಿಕಾರಿಗಳಾಗಲಿ, ಪೊಲೀಸ್ ವರಿಷ್ಠಾಧಿಕಾರಿಗಳು ಸಹ ನಮ್ಮ ಸಮಸ್ಯೆಯತ್ತ ಗಮನ ಹರಿಸಿಲ್ಲ. ಇದರಿಂದ ನಮಗೆ ತುಂಬಾ ಅನ್ಯಾಯವಾಗಿದೆ. ಹೀಗಾಗಿ ಬರುವ ಏ. ೨೩ರಂದು ನಡೆಯುವ ಲೋಕಸಭಾ ಚುನಾವಣೆಯ ಮತದಾನವನ್ನು ನಮ್ಮ ಕುಟುಂಬ ಸಮೇತ ಬಹಿಷ್ಕರಿಸುವ ನಿರ್ಧಾರ ಮಾಡಿದ್ದೇವೆ. ಇದಕ್ಕೆಲ್ಲ ಆಡಳಿತ ಮಂಡಳಿ ಕಾರಣ ಎಂದರು.

ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಅಕ್ಬರ್‌ಖಾನ್, ಪ್ರಧಾನ ಕಾರ್ಯದರ್ಶಿ ಗೋವರ್ಧನ್, ಉಪ ಕಾರ್ಯದರ್ಶಿ ಬಸವರಾಜ ಮಕ್ಕಿ, ಖಜಾಂಚಿ ಸಿ. ಹುಲಿಗಯ್ಯ, ತಾಲೂಕು ಪಂಚಾಯತ್ ಸದಸ್ಯರಾದ ಪಾಲಾಕ್ಷಪ್ಪ ಗುಂಗಾಡಿ, ಹುಲಿಗಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪಂಪನಗೌಡ್ರು ಪೊಲೀಸ್‌ಪಾಟೀಲ್, ಬಿಜೆಪಿ ಕಾರ್ಮಿಕ ಘಟಕದ ಜಿಲ್ಲಾ ಮುಖಂಡ ಬಸವರಾಜ ಭೋವಿ, ಅಗಳಕೇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಸವರಾಜ ಕರ್ಕಿಹಳ್ಳಿ, ಬಂಡಿಹರ್ಲಾಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹ್ಮದ್ ರಫಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ