ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದ ತೆಜಸ್ವಿನಿ ಅನಂತ್ ಕುಮಾರ್ ಗೆ ಪಕ್ಷದ ಹೈಕಮಾಂಡ್ ಶಾಕ್ ನೀಡಿದೆ. ಆ ಮೂಲಕ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿರುವ ಕಾಂಗ್ರೆಸ್ ನ ಬಿಕೆ ಹರಿಪ್ರಸಾದ್ ಪ್ರತಿಸ್ಪರ್ಧಿ ಯಾರಾಗಲಿದ್ದಾರೆ ಎಂಬ ಕುತೂಹಲ ಇನ್ನು ಮುಂದುವರಿದಿದೆ.
ಇದಕ್ಕೂ ಮುನ್ನ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಉಮೇದುವಾರಿಕೆ ಸಲ್ಲಿಸಲು ಇಂದು ಬೆಳಿಗ್ಗೆ ತೇಜಸ್ವಿನಿ ಸಿದ್ಧತೆ ನಡೆಸಿದ್ದರು. ಆದರೆ ಬಿಜೆಪಿ ಹೈಕಮಾಂಡ್ ನಾವು ಸೂಚನೆ ನೀಡುವವರೆಗೂ ನಾಮಪತ್ರ ಸಲ್ಲಿಸಬೇಡಿ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದರೊಂದು ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಮತ್ತಷ್ಟು ಹೆಚ್ಚಳವಾಗಿದೆ. ಇನ್ನು ಸಂಘ ಪರಿವಾರದ ತೇಜಸ್ವಿ ಸೂರ್ಯ ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ. ಏತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರೇ ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬ ಮಾತು ಕೆಲ ದಿನಗಳಿಂದ ಕೇಳಿ ಬರುತ್ತಿದೆ. ಆದರೆ ನಾಮಪತ್ರ ಸಲ್ಲಿಸಲು ನಾಳೆಯೇ ಕೊನೆ ದಿನವಾಗಿರುವ ಹಿನ್ನೆಲೆ ಅಭ್ಯರ್ಥಿ ಆಯ್ಕೆ ಮಾಡಲು ಬಿಜೆಪಿಗೆ ಹೆಚ್ಚು ಸಮಯ ಉಳಿದಿಲ್ಲ.