ಬೀದರ, ಮಾ. 24: ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ ಅವರು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ನಾಯಕರಿಗೆ ಹಾಗೂ ಮುಸ್ಲಿಂ ಸಮುದಾಯದವರಿಗೆ ಅವಹೇಳನ ಮಾಡಿದ್ದನ್ನು ಖಂಡಿಸಿ, ಮುಸ್ಲಿಂ ಸಮುದಾಯದವರು ನಗರದ ಅಂಬೇಡ್ಕರ್ ವೃತ್ತದಲ್ಲಿ ಮಿಂಚಿನ ಪ್ರತಿಭಟನೆ ನಡೆಸಿದರು.
ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಜನಾಂಗದ ಮತಗಳ ಅಗತ್ಯವಿಲ್ಲ ಹಾಗೂ ಯುವ ಮುಖಂಡ ಮುಸ್ಲಿಂ ಜನಾಂಗದ ಜನನಾಯಕ ಅಯಾಜ್‍ಖಾನ ಅವರ ಅಗತ್ಯವೂ ಇಲ್ಲ ಎಂಬ ಉದ್ಧಟತನದ ಮಾತಾಡಿ ಮುಸ್ಲಿಂ ಸಮುದಾಯಕ್ಕೆ ಅವಹೇಳನ ಮಾಡಿದ್ದಾರೆ. ಏಪ್ರೀಲ್ 23 ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ.
ದೇಶ ಸ್ವಾತಂತ್ರ್ಯವವಾದಾಗಿನಿಂದ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುತ್ತ ಬಂದಿದ್ದಾರೆ. ಆದರೆ, ಬೀದರ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ ಅವರು ಮುಸ್ಲಿಂ, ಕ್ರಿಶ್ಚನ, ಬೌದ್ಧ, ಜೈನ, ಪಾರ್ಸಿ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಅವಮಾನ ಮಾಡಿದ್ದು ರುಜುವಾತಾಗಿದೆ. ಬಸವರಾಜ ಜಾಬಶೆಟ್ಟಿ ಅವರು ಕ್ಷಮೆಯಾಚಿಸಬೇಕು ಇಲ್ಲವೇ ರಾಜಿನಾಮೆ ನೀಡಬೇಕು ಎಂದು ಆಲ್ ಇಂಡಿಯಾ ಇಮಾಮ ಕೌನ್ಸಿಲ್ ಅಧ್ಯಕ್ಷರಾದ ಮುಫ್ತಿ ಗಫಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.