ಡೈರಿ ಪ್ರಕರಣ: ಕಾಂಗ್ರೆಸ್‍ಗೆ 10 ಪ್ರಶ್ನೆಗಳನ್ನು ಮುಂದಿಟ್ಟ ಸಿ.ಟಿ ರವಿ

ಬೆಂಗಳೂರು,ಮಾ.23- ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ದಿಢೀರನೆ ಸದ್ದು ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಷ್ಟ್ರೀಯ ನಾಯಕರಿಗೆ ನೀಡಿದ್ದಾರೆ ಎನ್ನಲಾದ ಕಪ್ಪಕಾಣಿಕೆ ಡೈರಿ ಈಗ ಹೊಸ ತಿರುವು ಪಡೆದುಕೊಂಡಿದೆ.

ಎಐಸಿಸಿ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ ನಿನ್ನೆ ಯಡಿಯೂರಪ್ಪನವರಿಗೆ ಸೇರಿದ್ದು ಎನ್ನಲಾದ ಡೈರಿ ನಕಲಿ ಹಾಗೂ ಇದನ್ನು ತಿದ್ದುಪಡಿ ಮಾಡಲಾಗಿದೆ ಎಂದು ಬಿಜೆಪಿ ತಿರುಗೇಟು ನೀಡಿದ್ದು, ಕಾಂಗ್ರೆಸ್‍ಗೆ 10 ಪ್ರಶ್ನೆಗಳನ್ನು ಮುಂದಿಟ್ಟಿದೆ.

ಡೈರಿಯನ್ನು ಮುದ್ರಿಸುವ ಭರದಲ್ಲಿ ಕಾಂಗ್ರೆಸ್ ಸುಳ್ಳು ಕಥೆಯನ್ನು ಸೃಷ್ಟಿಸಿದೆ.ಪ್ರತಿ ಪುಟದಲ್ಲೂ ಯಡಿಯೂರಪ್ಪನವರ ಸಹಿಯನ್ನು ಬದಲಾವಣೆ ಮಾಡಲಾಗಿದೆ.

ಮೊದಲನೆಯದಾಗಿ ಅವರು ಡೈರಿ ಬರೆದಿಡುವ ಅಭ್ಯಾಸವಿಲ್ಲ. ಇನ್ನು ಅವರು ಯಾವ ರೀತಿ ಸಹಿ ಹಾಕುತ್ತಾರೆ ಎಂಬುದಕ್ಕೆ ಸಾಕ್ಷಿಯನ್ನು ನೀಡಿರುವ ಬಿಜೆಪಿ ಡೈರಿಯಲ್ಲಿರುವ ಸಹಿಗೂ, ಪ್ರಸ್ತುತ ಬಿಎಸ್‍ವೈನವರ ಸಹಿಗೂ ವ್ಯತ್ಯಾಸ ಗೊತ್ತಾಗುವುದಿಲ್ಲವೇ ಎಂದು ಪ್ರಸಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಕಾಂಗ್ರೆಸ್‍ಗೆ 10 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.ಕಾಂಗ್ರೆಸ್ ಚುನಾವಣೆಗೂ ಮುನ್ನವೇ ಸೋಲನ್ನು ಒಪ್ಪಿಕೊಂಡಂತಾಗಿದೆ.

ಅಭಿವೃದ್ಧಿ ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಲಾಗದೆ ಗತಕಾಲದ ವಿಷಯಗಳನ್ನು ಹೆಕ್ಕಿ ತೆಗೆಯುವುದರಲ್ಲಿ ನಿರತವಾಗಿದೆ. ಮುದ್ರಣಗೊಂಡಿರುವ ಡೈರಿಗೂ, ತಿದ್ದುಪಡಿ ಮಾಡಿರುವ ಡೈರಿಗೂ ವ್ಯತ್ಯಾಸ ಗೊತ್ತಾಗುವುದಿಲ್ಲವೆ ಎಂದು ಪ್ರಶ್ನಿಸಿದೆ.

ಇನ್ನು ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಬಿಡುಗಡೆ ಮಾಡಿರುವುದು ಅಪ್ಪಟ ನಕಲಿ ಡೈರಿ.ನಾನು ಆರಂಭದಿಂದಲೂ ಹೇಗೆ ಸಹಿ ಮಾಡುತ್ತೇನೆ ಎಂಬುದು ಎಲ್ಲರಿಗೂ ಗೊತ್ತು.ಕಾಂಗ್ರೆಸ್ ಬಿಡುಗಡೆ ಮಾಡಿರುವ ಈ ಸುಳ್ಳಿನ ಕಂತೆಯಲ್ಲಿ ಅವರೇ ಬೆತ್ತಲಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಡೈರಿಯಲ್ಲಿರುವುದು ಯಡಿಯೂರಪ್ಪ ಸಹಿ ಅಲ್ಲವೇ ಅಲ್ಲ ಎಂದು ಹೇಳಲಾಗುತ್ತಿದ್ದು, ಡೈರಿಯಲ್ಲಿರುವ ಸಹಿಗೂ ಬಿಎಸ್‍ವೈ ಅವರ ಸಹಿಗೂ ವ್ಯತ್ಯಾಸ ಇದೆ ಎಂದು ಸಹಿಯ ಅಸಲಿ, ನಕಲಿ ಬಗ್ಗೆ ದಾಖಲೆಯನ್ನು ಯಡಿಯೂರಪ್ಪ ಆಪ್ತರು ಬಿಡುಗಡೆ ಮಾಡಿದ್ದಾರೆ.

2009ರಲ್ಲಿ ಸಚಿವರಾಗಿದ್ದ ಶರದ್ ಪವಾರ್‍ಗೆ ಬಿಎಸ್‍ವೈ ಪತ್ರ ಬರೆದಿದ್ದರು.ಈ ಪತ್ರವನ್ನು ಇಂದು ಬಿಎಸ್‍ವೈ ಆಪ್ತರು ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ರಿಲೀಸ್ ಮಾಡಿದ ಡೈರಿಯಲ್ಲಿರುವ ಸಹಿಗೂ ಈ ಸಹಿಗೂ ಇರುವ ವ್ಯತ್ಯಾಸವನ್ನು ವಿವರಿಸಿದ್ದಾರೆ.

ಇಷ್ಟು ಮಾತ್ರವಲ್ಲದೆ ಯೂರಿಯಾ ಬಗ್ಗೆ ಜುಲೈ 2009ರಲ್ಲಿ ಬಿಎಸ್‍ವೈ ಬರೆದಿದ್ದ ಪತ್ರವನ್ನೂ ಬಿಡುಗಡೆ ಮಾಡುವ ಮೂಲಕ ಸಹಿಯ ಪ್ರತಿ ಅಕ್ಷರ ವ್ಯತ್ಯಾಸ ತೋರಿಸಿ ಮಾರ್ಕ್ ಮಾಡಿ ದಾಖಲೆ ಬಿಡುಗಡೆಗೊಳಿಸಿದ್ದಾರೆ.

ಹಾಗಾದರೆ ಶುಕ್ರವಾರ ಕಾಂಗ್ರೆಸ್ ಬಿಡುಗಡೆ ಮಾಡಿದ ಡೈರಿಯಲ್ಲಿರುವ ಯಡಿಯೂರಪ್ಪನವರ ಸಹಿ ನಕಲಿಯೋ ಅಥವಾ ಅಸಲಿಯೋ ಎಂಬುದು ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ. ಇತ್ತ ಸಿಬಿಡಿಟಿ ಕೂಡ ಇದು ಬಿಎಸ್‍ವೈ ಅವರ ಕೈ ಬರಹ ಅಲ್ಲ ಎಂದು ಸ್ಪಷ್ಟನೆ ನೀಡಿದೆ.

ಬಿಜೆಪಿ ಕಾಂಗ್ರೆಸ್ ಮುಖಂಡರ ಮುಂದಿಟ್ಟಿರುವ ಹತ್ತು ಪ್ರಶ್ನೆಗಳು:
ನಿಮ್ಮ ಪಕ್ಷದ ರಾಷ್ಟ್ರೀಯ ಮುಖಂಡರು ರಾಜ್ಯ ಬಿಜೆಪಿ ಅಧ್ಯಕ್ಷಬಿ.ಎಸ್.ಯಡಿಯೂರಪ್ಪನವರ ಮೇಲೆ 1800 ಕೋಟಿ ರೂ.ಪಾವತಿ ಕುರಿತಾದ ಡೈರಿ ಪ್ರಸ್ತಾಪ ಮಾಡಿದ್ದಾರೆ.

ನಿಮ್ಮ ಆರೋಪದಲ್ಲಿ ಸಾಚಾತನ ಇದ್ದರೆ ಈ ಪ್ರಶ್ನೆಗಳಿಗೆ ಉತ್ತರಿಸುತ್ತೀರಿ:
1.ಈ ಡೈರಿ ನಿಮಗೆ ಸಿಕ್ಕಿದ್ದು ಯಾವಾಗ?
2.ಯಾರು ಈ ಡೈರಿಯನ್ನು ತಂದುಕೊಟ್ಟರು ?
3.ಎಲ್ಲಿ ಕೊಟ್ಟರು?
4.ಒರಿಜನಲ್ ಡೈರಿ ಎಲ್ಲಿ?
5.ಯಾಕೆ ಇದುವರೆಗೂ ಈ ಡೈರಿ ಆಧರಿಸಿ ಲೋಕಾಯುಕ್ತ ಅಥವಾ ಎಸಿಬಿಗೆ ದೂರು ಕೊಡಲಿಲ್ಲ?
6.2013ರ ಮೇ ತಿಂಗಳಿನಿಂದ ನಿಮ್ಮದೇ ಪಕ್ಷದ ಆಡಳಿತ ಇದ್ದರೂ ಯಾವುದೇ ತನಿಖೆ ನಡೆಸದೇ ಇರಲು ಕಾರಣವೇನು?
7.ಯಡಿಯೂರಪ್ಪನವರದ್ದೆಂದು ಹೇಳಲಾದ ಡೈರಿಯು ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ ಪತ್ತೆಯಾಗಿದ್ದು ಹೇಗೆ? ಇದಕ್ಕೆ ಡಿ.ಕೆ.ಶಿವಕುಮಾರ್ ಉತ್ತರಿಸಬೇಕಾಗಿದೆ.
8.ಈ ಹಿಂದೆ ಪ್ರಕರಣವೊಂದರ ಬಗ್ಗೆ ಎಸಿಬಿಗೆ ದೂರು ನೀಡಿದ್ದ ಕಾಂಗ್ರೆಸ್ ಮುಖಂಡರು ಈಗ ಯಾವುದೇ ದೂರು ನೀಡದೇ ಇರಲು ಕಾರಣವೇನು?
9.ಎಂ.ಎಲ್.ಸಿ ಗೋವಿಂದರಾಜ್ ಅವರ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ಡೈರಿಯಲ್ಲಿ ಕಾಂಗ್ರೆಸ್ಸಿನ ಯಾವ್ಯಾವ ನಾಯಕರಿಗೆ ಹಣ ಸಂದಾಯವಾಗಿದೆ ಎನ್ನುವುದು ನಮೂದಾಗಿತ್ತು.ಆಗ ಕಾಂಗ್ರೆಸ್ ಮುಖಂಡರು ಮುಜಗರಕ್ಕೆ ಸಿಲುಕಿದ್ದಾಗಲೇ ಯಡಿಯೂರಪ್ಪ ಅವರ ಡೈರಿ ಕಾಂಗ್ರೆಸ್ ಪ್ರಾಯೋಜಕತ್ವದಲ್ಲಿ ಸೃಷ್ಟಿಯಾಗಿದ್ದು ನಿಜವಲ್ಲವೇ?
10.ಬಿಜೆಪಿ ನಾಯಕರದ್ದೆನ್ನಲಾದ ಡೈರಿ ಪ್ರಕರಣವು ಜನಲೋಕಪಾಲ್ ತನಿಖೆ ನಡೆಸಲು ಯೋಗ್ಯವಾಗಿದೆ ಎಂದು ಕಾಂಗ್ರೆಸ್ ವಕ್ತಾರರು ಹೇಳಿದ್ದಾರೆ.ಆದರೆ ಆರೋಪ ಮಾಡಿದವರು ದೂರು ನೀಡಬೇಕೇ ಅಥವಾ ದೂರಿಗೊಳಗಾದವರೇ?
ಡೈರಿ ಬರೆಯುವವರು ಯಾರೂ ಪ್ರತೀ ಪುಟಗಳಲ್ಲಿ ಸಹಿ ಮಾಡುವುದಿಲ್ಲ!

ಒಂದು ವೇಳೆ ಡೈರಿ ಬರೆಯುವವರು ಯಾರಿಗೆ ಕೊಟ್ಟಿದ್ದೇವೆ ಎಂದು ಮಾತ್ರ ಬರೆಯುವುದಿಲ್ಲ. ಯಾರಿಂದ ಬಂದಿದೆ ಎನ್ನುವುದನ್ನೂ ಬರೆಯುತ್ತಾರೆ.ಆದರೆ ಕಾಂಗ್ರೆಸ್ ಪ್ರಕಟಿಸಿರುವ ಡೈರಿಯಲ್ಲಿ ಇದಾವುದೂ ಇಲ್ಲ.

ಇಷ್ಟಕ್ಕೂ2010ರ ಪೂರ್ವದಲ್ಲಿ ಯಡಿಯೂರಪ್ಪನವರುತಮ್ಮ ಸಹಿಯನ್ನು ಸಂಖ್ಯಾಶಾಸ್ತ್ರದ ಪ್ರಕಾರ ಯಡ್ಯೂರಪ್ಪ ಎಂದು ಸಹಿ ಮಾಡುತ್ತಿದ್ದರು.
ಇದನ್ನು ಗಮನಿಸಿದಾಗ ಭಾರತೀಯ ಜನತಾ ಪಾರ್ಟಿ ಮತ್ತು ಬಿ.ಎಸ್.ಯಡಿಯೂರಪ್ಪನವರಿಗೆ ಕೆಟ್ಟ ಹೆಸರು ತರಲು,ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ನಾಯಕರು ರೂಪಿಸಿರುವ ಸಂಚು ಇದೆಂದು ಅರ್ಥವಾಗುತ್ತದೆ.

ದೇಶದ ಚೌಕೀದಾರರ ಪರವಾಗಿ ವ್ಯಕ್ತವಾಗುತ್ತಿರುವ ಜನಬೆಂಬಲದಿಂದ ಹತಾಶರಾಗಿರುವ ಕಾಂಗ್ರೆಸ್ ಪಕ್ಷದ ಚೋರರು ಮಾಡುತ್ತಿರುವ ಹತಾಶ ಪ್ರಯತ್ನ ಎನ್ನುವುದು ದೇಶದ ಜನರಿಗೆ ಗೊತ್ತಿದೆ.

ಈ ಚುನಾವಣೆಯು ಚೌಕೀದಾರ / ಚೋರರ ನಡುವಿನ ಚುನಾವಣೆ ಎನ್ನುವುದು ಸ್ಪಷ್ಟವಾಗಿದೆ. ಚೌಕೀದಾರ ಎಚ್ಚರವಾಗಿದ್ದಾನೆ.ದೇಶದ ಮತದಾರರು ಕೂಡ ತಾವೂ ಚೌಕೀದಾರ(ಮೈ ಭೀ ಚೌಕೀದಾರ್)ರಂತೆ ಎಚ್ಚರವಾಗಿದ್ದಾರೆ. ನಿಮ್ಮ ನಕಲಿ ಆಟ ನಡೆಯುವುದಿಲ್ಲ.

ದಿನನಿತ್ಯ ಹಗರಣ ನಡೆಸಿ ಆಕಾಶ,ಭೂಮಿ,ಪಾತಾಳದಲ್ಲಿ ತಮ್ಮ ಹಗರಣಗಳ ಪರಾಕ್ರಮ ತೋರಿಸಿರುವ ಚೋರರಿಗೆ ರಾಜಕೀಯ ಭವಿಷ್ಯವಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ