ಡೈರಿ ಪ್ರಕರಣ ಲೋಕಪಾಲ ತನಿಖೆಗೊಳಪಡಿಸಬೇಕು;ಮಾಜಿ ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು,ಮಾ.23- ಬಿಎಸ್‍ವೈ ಡೈರಿ ಪ್ರಕರಣ ಲೋಕಪಾಲ ತನಿಖೆಗೊಳಪಡಬೇಕೆಂದು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೈರಿಯಲ್ಲಿ ಇರುವ ಸಹಿ ಯಡಿಯೂರಪ್ಪ ಅವರದೇ. ಅದು ನಿಜವೋ , ಸುಳ್ಳೋ ಎಂಬುದರ ಬಗ್ಗೆ ಸಮಗ್ರ ತನಿಖೆ ಆಗಬೇಕು. ಯಾವ ಆಪಾದಿತನು ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಬಿಎಸ್‍ವೈ ಕೂಡ ತಪ್ಪು ನನ್ನದಲ್ಲ ಎಂದು ವಾದಿಸುತ್ತಾರೆ. ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೆದರಿಸುತ್ತಿದ್ದಾರೆ. ಸತ್ಯ ಯಾವುದು, ಸುಳ್ಳು ಯಾವುದು ಎಂಬ ಬಗ್ಗೆ ತನಿಖೆಯಾಗಲಿ ಎಂದು ಹೇಳಿದರು.

ಈಗಾಗಲೇ ನಮ್ಮ ಪಕ್ಷ ಆರೋಪ ಮಾಡಿದೆ.ಅದನ್ನು ಸುಳ್ಳು ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ.ಆರೋಪಿ ಹೇಳಿದ್ದೇ ತನಿಖಾ ವರದಿ ಅಲ್ಲ. ಡೈರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಈವರೆಗೂ ಬಾಯಿಬಿಟ್ಟಿಲ್ಲ. ಅದು ಸತ್ಯ ಎಂದು ಅವರಿಗೆ ಗೊತ್ತಿದೆ.ಅದಕ್ಕಾಗಿ ಮೌನವಾಗಿದ್ದಾರೆ ಎಂದು ಹೇಳಿದರು.

ಯಡಿಯೂರಪ್ಪನವರ ಡೈರಿಯಲ್ಲಿ ಸಾಕಷ್ಟು ಅಂಶಗಳನ್ನು ಪ್ರಸ್ತಾಪಿಸಲಾಗಿದೆ. ಯಾರ್ಯಾರಿಗೆ ಎಷ್ಟು ದುಡ್ಡು ಕೊಡಲಾಗಿದೆ ಎಂಬುದು ಅದರಲ್ಲಿದೆ.ಕೇಂದ್ರದಲ್ಲಿ ಲೋಕಪಾಲ ಸಂಸ್ಥೆ ರಚನೆಯಾಗಿದೆ.ಆ ಸಂಸ್ಥೆಯೇ ಇದನ್ನು ತನಿಖೆ ನಡೆಸಲಿ.ಜನರ ಮುಂದೆ ಸತ್ಯ ಹೇಳಲಿ. ಈವರೆಗೂ ಯಡಿಯೂರಪ್ಪ ತಮ್ಮ ಮೇಲೆ ಬಂದ ಯಾವ ಆರೋಪವನ್ನು ಒಪ್ಪಿಕೊಂಡಿಲ್ಲ. ಎಲ್ಲವನ್ನು ಅಲ್ಲೆಗೆಳೆಯುತ್ತಾ ಬಂದಿದ್ದಾರೆ.

ಇತ್ತೀಚೆಗೆ ದೇವದುರ್ಗದ ಆಡಿಯೋ ಪ್ರಕರಣವನ್ನು ಮಾತ್ರ ಅವರು ಒಪ್ಪಿಕೊಂಡಿದ್ದಾರೆ.ಹೀಗಾಗಿ ಡೈರಿ ಹಗರಣವು ತನಿಖೆಯಾಗಲಿ ಎಂದು ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ