ಮಂಡ್ಯ: ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಷ್ ವಿರುದ್ಧ ಜೆಡಿಎಸ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಸೋಮವಾರ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ. ಈ ಮುನ್ನ ಬೃಹತ್ ರ‍್ಯಾಲಿ ನಡೆಸಲಿದ್ದು, ಸುಮಲತಾರ ವಿರುದ್ಧ ದಂಡಯಾತ್ರೆ ನಡೆಸಲು ಜೆಡಿಎಸ್ ಮುಂದಾಗಿದೆ. ಹಾಗೆಯೇ ಸುಮಲತಾ ಅವರು ನಾಮಪತ್ರಕ್ಕೆ ಸೇರಿಸಿದ್ದ ಜನಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಜೆಡಿಎಸ್ ತನ್ನ ತಾಕತ್ತು ಪ್ರದರ್ಶಿಸಲಿದೆ ಎನ್ನಲಾಗಿದೆ.
ಈ ಸಮಾವೇಶದ ಪೂರ್ವ ಸಿದ್ಧತೆ ಬಗ್ಗೆ ಚರ್ಚಿಸಲು ಇಂದು ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಮಂಡ್ಯ ಪ್ರಮುಖರ ಸಭೆ ಕರೆದಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ವೊಂದರಲ್ಲಿ ರಾತ್ರಿ ಹೊತ್ತಿಗೆ ಸಭೆ ನಡೆಯಲಿದೆ. ಇಲ್ಲಿ ಸಚಿವರಾದ ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು ಸೇರಿದಂತೆ ಸಚಿವ ಸಾ.ರಾ.ಮಹೇಶ್, ಜಿಲ್ಲೆಯ ಏಳು ಶಾಸಕರು, ಮೂವರು ಎಂಎಲ್ಸಿ, ಪದಾಧಿಕಾರಿಗಳು, ಸ್ಥಳೀಯ ಜೆಡಿಎಸ್ ಮುಖಂಡರು ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ನಾಮಪತ್ರ ಸಲ್ಲಿಕೆಗೆ ಮುನ್ನವೇ ನಡೆಯಲಿರುವ ಸಮಾವೇಶಕ್ಕೆ 2 ಲಕ್ಷ ಜನರನ್ನು ಕರೆತರುವ ಯೋಜನೆ ಹಾಕಿಕೊಳ್ಳಲಾಗಿದೆ. ಹೀಗಾಗಿ ಜನರನ್ನು ಹೇಗೆ ಸೇರಿಸಬೇಕೆಂದು? ಜೆಡಿಎಸ್ ಶಾಸಕರ ಜತೆ ಚರ್ಚಿಸಲು ಸಿಎಂ ಎಚ್.ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕನಿಷ್ಠ 15 ಸಾವಿರಕ್ಕೂ ಹೆಚ್ಚು ಜನರನ್ನು ಕರೆತರಬೇಕು ಎಂದು ಖಡಕ್ ಸೂಚನೆ ನೀಡಲಿದ್ದಾರೆ.
ಇದೇ ವಿಚಾರವಾಗಿಯೇ ಇಂದು ಸಿಎಂ ಸಭೆ ನಡೆಸಲಿದ್ದಾರೆ. ಈ ಮೂಲಕ ಸುಮಲತಾ ಅಂಬರೀಷ್ ನಡೆಸಿದ ಸಮಾವೇಶಕ್ಕೆ ಟಕ್ಕರ್ ಕೊಡಲು ಜೆಡಿಎಸ್ ಮುಂದಾಗಿದ್ದಾರೆ. ಸುಮಲತಾ ಸಮಾವೇಶಕ್ಕೆ ಸೇರಿದ್ದ ಜನರಿಗಿಂತ ಹೆಚ್ಚು ಜನರನ್ನು ಸೇರಿಸಲು ಜೆಡಿಎಸ್ ನಾಯಕರು ಸರ್ಕಸ್ ತಯಾರಿ ನಡೆಸಿಕೊಳ್ಳುತ್ತಿದ್ಧಾರೆ.
ಒಂದು ವೇಳೆ ಅಂದಿನ ಸಮಾವೇಶಕ್ಕೆ ಕಡಿಮೆ ಜನ ಬಂದಲ್ಲಿ ಸಿಎಂಗೆ ಮುಖಭಂಗ ಆಗುವ ಸಾಧ್ಯತೆಯಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಸರಿಯಾಗಿ ಪೂರ್ವ ತಯಾರಿ ನಡೆಸಿಕೊಳ್ಳುತ್ತಿದ್ದಾರೆ ಎನ್ನುತ್ತಿವೆ ಮೂಲಗಳು.