ಇರಾಕ್‍ನಲ್ಲಿ ನೌಕೆ ಮುಳುಗಿ 100ಕ್ಕೂ ಹೆಚ್ಚು ಮಂದಿ ಸಾವು

ಮೊಸುಲ್, ಮಾ.22-ಕುರ್ಡಿಶ್ ಹೊಸ ವಷಾರ್ಚಚಣೆ ಸಂಭ್ರಮದಲ್ಲಿ ಜಲ ವಿಹಾರದಲ್ಲಿದ್ದ ಪ್ರವಾಸಿಗರ ನೌಕೆಯೊಂದು ಮುಳುಗಿ 100ಕ್ಕೂ ಹೆಚ್ಚು ಮಂದಿ ಜಲಸಮಾಧಿಯಾದ ಘಟನೆ ಇರಾಕ್‍ನ ಉತ್ತರ ಭಾಗದ ಮೊಸುಲ್ ನಗರದ ಟೈಗ್ರಿಸ್ ನದಿಯಲ್ಲಿ ಸಂಭವಿಸಿದೆ. ಮೃತರಲ್ಲಿ ಬಹುತೇಕ ಮಂದಿ ಮಹಿಳೆಯರು ಮತ್ತು ಮಕ್ಕಳೇ ಆಗಿದ್ದಾರೆ. ಇದನ್ನು ಇರಾಕ್‍ನ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಭೀಕರ ದುರಂತ ಎಂದು ಬಣ್ಣಿಸಲಾಗಿದೆ.

ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿಗಳ ವಶದಲ್ಲಿದ್ದ ನಗರವನ್ನು ಸೇನಾಪಡೆಗಳು ಮರುವಶಪಡಿಸಿಕೊಂಡ ನಂತರ ಅಲ್ಲಿ ಈ ವರ್ಷದಿಂದ ಸಾಂಪ್ರದಾಯಿಕ ಆಚರಣೆಗಳನ್ನು ನಡೆಸಲಾಗುತ್ತಿತ್ತು, ಕುರ್ಡಿಷ್ ಸಮುದಾಯದ ಹೊಸ ವರ್ಷಾಚರಣೆ(ನೌರುಝ್) ಪ್ರಯುಕ್ತ ಜನರು ತಮ್ಮ ಕುಟುಂಬ ಸದಸ್ಯರೊಂದಿಗೆ ಟೈಗ್ರಿಸ್ ನದಿಯಲ್ಲಿ ಜಲ ವಿಹಾರದಲ್ಲಿ ತೊಡಗಿದ್ದರು.

ಭೋರ್ಗರೆಯುತ್ತಿದ್ದ ನದಿಯಲ್ಲಿ ಕಿಕ್ಕಿರಿದು ತುಂಬಿದ್ದ ನೌಕೆ ಮುಳುಗಿ 100 ಕ್ಕೂ ಹೆಚ್ಚು ಮಂದಿ ಮೃತಪಟ್ಟರು. ಪುರುಷರು ಮತ್ತು ವೃದ್ದರೂ ಸಹ ಈ ದುರ್ಘಟನೆಯಲ್ಲಿ ನೀರುಪಾಲಾದರು. ಇರಾಕ್‍ನಲ್ಲಿ ಮಾತೆಯರ ದಿನಾಚರಣೆಯಂದೇ ಸಂಭವಿಸಿದ ಈ ದುರಂತದಲ್ಲಿ ಮಹಿಳೆಯರು ಮತ್ತು ಮಕ್ಕಳೂ ಅಸುನೀಗಿದ್ದಾರೆ.

ಕೆಲವು ಪುರುಷರು ಈಜಿಕೊಂಡು ಸುರಕ್ಷಿತವಾಗಿ ದಡ ಸೇರಿದ್ದಾರೆ. ಕೆಲವರು ನಾಪತ್ತೆಯಾಗಿದ್ದು, ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಕೆಲವು ಶವಗಳನ್ನು ನೀರಿನಿಂದ ಹೊರ ತೆಗೆಯಲಾಗಿದ್ದು, ಕಣ್ಮರೆಯಾದವರಿಗೆ ಶೋಧ ಮುಂದುವರಿದಿದೆ.

ಇಕಾಕ್ ಪ್ರಧಾನಮಂತ್ರಿ ಅಡೆಲ್ ಅಬ್ಡೆಲ್ ಮಹಡಿ ದುರಂತದ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿ ಮೂರು ದಿನಗಳ ಶೋಕಾಚರಣೆ ಘೋಷಿಸಿದ್ಧಾರೆ.

ಮೃತರಿಗೆ ಸೂಕ್ತ ಪರಿಹಾರ ನೀಡುವಂತೆ ಅವರು ಉನ್ನತಾಧಿಕಾರಿಗಳಿಗೆ ಆದೇಶಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ