ಅಂತರ್ ಕೊರಿಯಾ ಸಂಬಂಧ ಕಾರ್ಯಾಲಯದಿಂದ ಹೊರಬಂದ ಉತ್ತರ ಕೊರಿಯಾ

ಸಿಯೋಲ್, ಮಾ.22-ಕಲಹ ಪ್ರಿಯ ಉತ್ತರ ಕೊರಿಯಾ ಮತ್ತೆ ತನ್ನ ವಕ್ರ ಬುದ್ಧಿಯನ್ನು ಪ್ರದರ್ಶಿಸಿದೆ. ದಕ್ಷಿಣ ಮತ್ತು ಉತ್ತರ ಕೊರಿಯಾ ನಡುವೆ ಸೌಹಾರ್ದ ಸಂಬಂಧಕ್ಕಾಗಿ ರಚನೆಯಾಗಿದ್ದ ಅಂತರ್ ಕೊರಿಯಾ ಸಂಬಂಧ ಕಾರ್ಯಾಲಯದಿಂದ ಉತ್ತರ ಕೊರಿಯಾ ಹೊರಬಂದಿದೆ.

ಸಿಯೋಲ್ ಸಮೀಪದ ಕಯಿಸಾಂಗ್ ಪ್ರದೇಶದಲ್ಲಿದ್ದ ಇಂಟರ್ ಕೊರಿಯಾ ಲೈಜನಿಂಗ್ ಕಚೇರಿಯಿಂದ ತನ್ನ ಸಿಬ್ಬಂದಿಯನ್ನು ಉತ್ತರ ಕೊರಿಯಾ ವಾಪಸ್ ಕರೆಸಿಕೊಂಡಿದೆ. ಇದರಿಂದಾಗಿ ಈ ಎರಡೂ ದೇಶಗಳ ಸಂಬಂಧ ಮತ್ತಷ್ಟು ಹಳಸಿದಂತಾಗಿದೆ.

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಇತ್ತೀಚೆಗೆ ನಡೆದ ಅಣ್ವಸ್ತ್ರ ನಿಶಸ್ತ್ರೀಕರಣ ಕುರಿತ ಮಾತುಕತೆ ಮುರಿದು ಬಿದ್ದ ಬೆನ್ನಲ್ಲೇ ಈ ಬೆಳವಣಿಗೆ ಕಂಡು ಬಂದಿದೆ.

ದಕ್ಷಿಣ ಕೊರಿಯಾ ಅಮೆರಿಕಕ್ಕೆ ಬೆಂಬಲ ನೀಡುತ್ತಿರುವುದು ಉತ್ತರ ಕೊರಿಯಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದೇ ಕಾರಣಕ್ಕಾಗಿ ಹಂತ ಹಂತವಾಗಿ ದಕ್ಷಿಣದ ಜೊತೆ ತನ್ನ ಸಂಬಂಧವನ್ನು ಕಡಿದುಕೊಳ್ಳಲು ಮುಂದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ