ಭಿನ್ನಮತಕ್ಕೆ ಸೊಪ್ಪುಹಾಕದ ನಾಯಕರು; ವಿರೋಧದ ನಡುವೆಯೂ ಸಚಿವ ಹೆಗ್ಡೆ, ಪ್ರತಾಪ್ ಸಿಂಹ, ಕರಂದ್ಲಾಜೆಗೆ ಟಿಕೆಟ್

ನವದೆಹಲಿ: ಶಾಸಕರು ಹಾಗೂ ಸ್ಥಳೀಯ ಕಾರ್ಯಕರ್ತರ ತೀವ್ರ ವಿರೋಧದ ನಡುವೆಯೂ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ, ಸಂಸದರಾದ ಶೋಭಾ ಕರದ್ಲಾಂಜೆ, ಪ್ರತಾಪ್ ಸಿಂಹ, ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಎ.ಮಂಜು, ರಾಜೀನಾಮೆ ಅಂಗೀಕಾರವಾಗದೆ ತೂಗುಯ್ಯಲೆಯಲ್ಲಿರುವ ಡಾ.ಉಮೇಶ್ ಜಾಧವ್ ಜಾಧವ್ ಸೇರಿದಂತೆ 21 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪಕ್ಷದಲ್ಲಿ ಭಿನ್ನಮತ ಉಂಟಾಗಬಹುದೆಂಬ ಭೀತಿಯಿಂದಾಗಿ ಇನ್ನು 7 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಳ್ಳುವ ಮೂಲಕ, ದೋಸ್ತಿ ಪಕ್ಷದ ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ನಂತರ ಘೋಷಣೆ ಮಾಡುವ ಸಾಧ್ಯತೆ ಇದೆ. ಕೆಲವು ಕ್ಷೇತ್ರಗಳಲ್ಲಿ ಒಂದಕ್ಕಿಂತ ಹೆಚ್ಚಿನ ಆಕಾಂಕ್ಷೆಗಳು ಇವರು ಕಾರಣ ಕಾದು‌ನೋಡುವ ತಂತ್ರವನ್ನು ಬಿಜೆಪಿ ಅನುಸರಿಸಿದೆ.

ಗುರುವಾರ ನವದೆಹಲಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ಕೇಂದ್ರ ಸಚಿವ ಹಾಗೂ ಕೇಂದ್ರ ಚುನಾವಣೆ ಸಮಿತಿ ಕಾರ್ಯದರ್ಶಿ ಜೆ.ಪಿ.ನಡ್ಡಾ 182 ಕ್ಷೇತ್ರಗಳಿಗೆ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದರು. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದರು.

ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರದ್ಲಾಂಜೆಗೆ ಟಿಕೆಟ್ ನೀಡಬಾರದೆಂದ ವಿರೋಧದ ನಡುವೆಯೂ ಎರಡನೇ ಬಾರಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೋರ್ ಕಮಿಟಿ ಹಾಗೂ ಆರ್.ಎಸ್.ಎಸ್ ನಾಯಕರು ಶೋಭಾಗೆ ಟಿಕೆಟ್ ಕೊಡಲು ವಿರೋಧಿಸಿದ್ದರು.ಹೀಗಾಗಿ ಈ ಕ್ಷೇತ್ರದಿಂದ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರ ಹೆಸರನ್ನು ಪಟ್ಟಿಯಲ್ಲಿ ಕಳುಹಿಸಿ ಕೊಡಲಾಗಿತ್ತು. ಆದರೆ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶೋಭಾಗೆ ಟಿಕೆಟ್ ನೀಡಲೇಬೇಕೆಂದು ವರಿಷ್ಟರ ಮೇಲೆ ಒತ್ತಡ ಹಾಕಿದ್ದರು.

ಇನ್ನು ತನ್ನ ವಿವಾದಾತ್ಮಕ ಹೇಳಿಕೆಯಿಂದಲೇ ಪಕ್ಷಕ್ಕೆ ಆಗಾಗ್ಗೆ ಮುಜುಗರ ಉಂಟುಮಾಡುತ್ತಿದ್ದ ಹಿಂದೂ ಪೈರ್ ಬ್ರಾಂಡ್ ಅನಂತ್ ಕುಮಾರ್ ಹೆಗ್ಡೆ ಪುನಃ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅವರ ಬದಲು ಬೇರೊಬ್ಬರಿಗೆ ಟಿಕೆಟ್ ಕೊಡುವಂತೆ ಸ್ಥಳೀಯರು ರಾಜ್ಯ ನಾಯಕರ ಮೇಲೆ ಒತ್ತಡ ಹಾಕಿದ್ದರು. ಹೆಗ್ಡೆ ಗೆ ಟಿಕೆಟ್ ತಪ್ಪಿದರೆ, ಪಕ್ಷ ನಂಬಿಕೊಂಡಿರುವ ಹಿಂದೂ ಮತಗಳು ಕೈ ತಪ್ಪಬಹುದಾದ ಭೀತಿಯಿಂದ ಅನಿವಾರ್ಯವಾಗಿ ಮಣೆ ಹಾಕಲಾಗಿದೆ.

ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡದೆ, ಕಳಪೆ ಸಂಸದ ಎಂದು ಆರ್.ಎಸ್.ಎಸ್. ನಾಯಕರಿಂದಲೇ ವಿರೋಧಕ್ಕೆ ಗುರಿಯಾಗಿದ್ದ ನಳೀನ್ ಕುಮಾರ್ ಕಟೀಲು ಮೂರನೇ ಬಾರಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಕಲ್ಕಡ ಪ್ರಭಾಕರ್ ಭಟ್ ಅವರು ಕಟೀಲುಗೆ ಟಿಕೆಟ್ ಕೊಡಲೇಬಾರದೆಂದು ಬಹಿರಂಗವಾಗಿಯೇ ಹೇಳಿದ್ದರು.

ಆದರೂ, ‌ಹೈ ಕಮಾಂಡ್ ಅವರಿಗೆ ಪುನಃ ಮಣೆ ಹಾಕಿದೆ.

ಮೈಸೂರು- ಕೊಡಗು ಸಂಸದ ಪ್ರತಾಪ್‌ ಸಿಂಹ ಎರಡನೇ ಬಾರಿ ಟಿಕೆಟ್ ಪಡೆದುಕೊಂಡಿದ್ದಾರೆ. ಇಲ್ಲಿಯೂ ಅವರಿಗೆ ಟಿಕೆಟ್ ನೀಡಲು ವಿರೋಧವಿತ್ತು.ಯಡಿಯೂರಪ್ಪನವರ ಪ್ರಭಾವ ಇಲ್ಲಿಯೂ ಕೆಲಸ ಮಾಡಿರುವುದು ಸ್ಪಷ್ಟ ವಾಗಿದೆ. ಬಳ್ಳಾರಿಯಲ್ಲಿ ಸೃಷ್ಟಿಯಾಗಿದ್ದ ಗೊಂದಲಗಳಿಗೆ ಈ ಪಟ್ಟಿ ತೆರೆ ಎಳೆದಿದೆ. ದೇವೇಂದ್ರಪ್ಪ, ವೆಂಕಟೇಶ್ ಪ್ರಸಾದ್ ಸೇರಿದಂತೆ ಮೂರ್ನಲ್ಕು ಮಂದಿಯ ಹೆಸರು ಬಳ್ಳಾರಿ ಟಿಕೆಟ್ ರೇಸ್​ನಲ್ಲಿದ್ದವು. ರಮೇಶ್ ಜಾರಕಿಹೊಳಿ ಅವರ ನೆಂಟರಾದ ದೇವೇಂದ್ರ ಪರವಾಗಿ ಬಿ. ಶ್ರೀರಾಮುಲು ಅವರು ನಿಂತಿದ್ದರೆಂಬ ಮಾತಿದೆ. ಈಗ ದೇವೇಂದ್ರ ಅವರೇ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

ಭಿನ್ನಮತಕ್ಕೆ ಸೊಪ್ಪು ಹಾಕದ ವರಿಷ್ಡರು:
ಕೋಟೆನಾಡು ಚಿತ್ರದುರ್ಗದಿಂದ ಭೋವಿ ಸಮುದಾಯಕ್ಕೆ ಟಿಕೆಟ್ ನೀಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೊಳಲ್ಕೆರೆ ಯ ಚಂದ್ರಪ್ಪ, ಹೊಸದುರ್ಗದ ಶಾಸಕ ಗೂಳಿಹಟ್ಟಿ ಅವರುಗಳ ಬೆದರಿಕೆಗೆ ಹೈ ಕಮಾಂಡ್ ಸೊಪ್ಪು ಹಾಕಿಲ್ಲ.

ಮಾಜಿ ಸಚಿವ ಎ .‌ನಾರಾಯಣಸ್ವಾಮಿ ಅವರಿಗೆ ಟಿಕೆಟ್ ಕೊಡಬಾರದು ಎಂಬುದು ಇವರ ಒತ್ತಾಯವಾಗಿತ್ತು. ಜಿಲ್ಲೆಯಲ್ಲಿರುವ ಭೋವಿ ಸಮುದಾಯದ ಒಬ್ಬರಿಗೆ
ಟಿಕೆಟ್ ನೀಡುವಂತೆ ಆಗ್ರಹ ಮಾಡಿದ್ದರು. ಅಲ್ಲದೇ ಈ ಕ್ಷೇತ್ರದ ಮೇಲೆ ಮಾಜಿ ಸಂಸದ ಜನಾರ್ಧಸ್ವಾಮಿ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಯಾರ ವಿರೋಧಕ್ಕೂ ತಲೆಕೆಡಿಸಿಕೊಳ್ಳದ ವರಿಷ್ಟರು ನಾರಾಯಣಸ್ವಾಮಿಗೆ ಮಣೆ ಹಾಕಿದ್ದಾರೆ. ಬೆಳಗಾವಿಯಲ್ಲಿ ಸುರೇಶ್ ಅಂಗಡಿ, ಬಾಗಲಕೋಟೆಯಲ್ಲಿ ಗದ್ದಿಗೌಡರ್ ನಾಲ್ಕನೇ ಬಾರಿ ಕಣಕ್ಕೀಳಿದಿದ್ದಾರೆ.

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಕೆಲವರ ವಿರೋಧದ ನಡುವೆಯೂ ಸಚಿವ ರಮೇಶ್ ಜಿಗಜಿಣಗಿ ಟಿಕೆಟ್ ಪಡೆದಿದ್ದಾರೆ. ತುಮಕೂರಿನಲ್ಲಿ ಯಡಿಯೂರಪ್ಪ ತಮ್ಮ ಆಪ್ತ ಹಾಗೂ ಮಾಜಿ ಸಂಸದ ಜಿ.ಹೆಚ್.ಬಸವರಾಜುಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಬಾರಿ ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ, ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಮಾಚಿ ಸಚಿವ ಎ.‌ಮಂಜು ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಅಂಗೀಕಾರವಾಗದೆ ಅತಂತ್ರ ಸ್ಥಿತಿಯಲ್ಲಿರುವ ಡಾ.ಉಮೇಶ್ ಜಾಧವ್‌ಗೂ ಮಣೆ ಹಾಕಲಾಗಿದೆ. ಉಳಿದಂತೆ ಶಿವಮೊಗ್ಗ, ದಾವಣಗೆರೆ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಹಾವೇರಿ, ಧಾರವಾಡ, ಬೀದರ್, ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಟಿಕೆಟ್ ನೀಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ