ಹಾಸನ, ಮಾ.20- ಬಡವರ ಊಟಿ ಎಂದೇ ಚಿರಪರಿಚಿತವಾಗಿರುವ ಜಿಲ್ಲೆಯಲ್ಲಿ ಈ ಬಾರಿಯ ರಣ ಬಿಸಿಲಿನಿಂದ ಧರೆ ಕಾದ ಹಂಚಿನಂತಾಗಿದ್ದು, ಕೆರೆ-ಕಟ್ಟೆ,ಬಾವಿಯ ನೀರು ಆವಿಯಾಗುತ್ತಿದ್ದು , ಜನ-ಜಾನುವಾರುಗಳು ಕುಡಿಯುವ ನೀರಿಗೂ ಪರಿತಪಿಸುವಂತಾಗಿದೆ.
ಎಂದೆಂದೂ ಕಂಡು ಕೇಳರಿಯದಷ್ಟು ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಿದೆ. ಇದರ ಪರಿಣಾಮ ಹಾಸನದಲ್ಲಿ ತಾಪಮಾನ 33 ಡಿಗ್ರಿ ತಲುಪಿದ್ದು ಜನ-ಜಾನುವಾರುಗಳು ಬಿಸಿಲಿನ ತಾಪಕ್ಕೆ ಬಸವಳಿದಿದ್ದಾರೆ.
ಜಿಲ್ಲೆಯ ಅರಸೀಕೆರೆ,ಅರಕಲಗೂಡು, ಚನ್ನರಾಯಪಟ್ಟಣದಂತಹ ಬಯಲು ಸೀಮೆ ಪ್ರದೇಶದಲ್ಲಿ ಕುಡಿಯುವ ನೀರಿನ ಹೆಚ್ಚು ಕೊರತೆಯಿದ್ದು , ಮುಂದಿನ ಕೆಲ ದಿನದಲ್ಲಿ ಇದರ ತೀವ್ರತೆ ಇನ್ನಷ್ಟು ಬಿಗಡಾಯಿಸಲಿದೆ.
ಹಲವು ಬಾರಿ ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯಲ್ಲಿಯೂ ಸಹ ಕ್ಷೇತ್ರದ ಶಾಸಕರು ಸಮಸ್ಯೆ ಕುರಿತು ಮನವರಿಕೆ ಮಾಡಿದ್ದಾರೆ. ಹಾಗೂ ಗ್ರಾಮಗಳಿಗೆ ಕನಿಷ್ಠ ಕುಡಿಯುವ ನೀರೊದಗಿಸಲು ಕ್ರಮ ವಹಿಸಲು ಸಭೆಯಲ್ಲಿ ಒತ್ತಾಯಿಸಿದ್ದಾರೆ.
ಇನ್ನೂ ಅರೆ ಮಲೆನಾಡಾದ ಬೇಲೂರು , ಆಲೂರು , ಹಾಸನ ತಾಲ್ಲೂಕಿನದ್ದು ಇದೇ ಪರಿಸ್ಥಿತಿಯಾಗಿದೆ. ಮಲೆನಾಡು ಪ್ರದೇಶವಾದ ಸಕಲೇಶಪುರದಲ್ಲಿ ಪ್ರತಿ ವರ್ಷ ಕೃಷಿ ಚಟುವಟಿಕೆಗೆ ನೀರಿನ ಕೊರತೆ ಹೆಚ್ಚುತ್ತಿತ್ತು.ಆದರೆ ಇಲ್ಲಿಯೂ ಕೆಲವು ಗ್ರಾಮದಲ್ಲಿ ಕುಡಿಯುವ ನೀರಿಗೆ ಬರ ಬಂದಿದೆ.
ಕಾಫಿಗೆ ನೀರಿನ ಕೊರತೆ: ಮಲೆನಾಡು ಭಾಗವಾದ ಸಕಲೇಶಪುರ, ಆಲೂರು, ಬೇಲೂರು ಪ್ರದೇಶದಲ್ಲಿ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಕಾಫಿ ಬೆಳೆಗೆ ನೀರಿನ ಅವಶ್ಯಕತೆ ಹೆಚ್ಚಿದೆ. ಆದರೆ ಈ ಭಾಗದಲ್ಲಿ ನೀರಿನ ಸೆಲೆಗಳು ಬತ್ತಿ ಹೋಗಲಾರಂಭಿಸಿದೆ.ಇಲ್ಲಿ ನೀರಿನ ಮೂಲಗಳು ಕಣ್ಮರೆಯಾಗಲು ಆಧುನಿಕತೆಯ ಹಲವು ಯೋಜನೆಗಳ ಜಾರಿಯೂ ಕಾರಣವಾಗಿದೆ.
ಕಾಫಿ ತೋಟಗಳಿಗೆ ನೀರಿನ ಕೊರತೆ ಎದುರಾಗಿದ್ದು ಬೆಳೆ ಒಣಗಲಾರಂಭಿಸಿ ದೆ.ಇರುವಂತಹ ಅಲ್ಪ ಸ್ವಲ್ಪ ಕೆರೆಯ ನೀರನ್ನು ತೋಟಗಳಿಗೆ ಸ್ಪಿಂಕ್ಲರ್ ಮಾಡುವ ಮೂಲಕ ರಕ್ಷಿಸಿಕೊಳ್ಳುವಂತಾಗಿದೆ.ಈಗಾಗಲೇ ಬೆಳೆಗೆ ಬೆಂಬಲ ಬೆಲೆ ಸಿಗದೆ ಪರಿತಪಿಸುತ್ತಿರುವ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ನಗರದ ಹಲವು ಬಡಾವಣೆಗಳಲ್ಲಿ ನೀರಿನ ಅಭಾವ ಹೆಚ್ಚುತ್ತಿದೆ.ನಗರಸಭೆ ವಾರದಲ್ಲಿ ಮೂರು ದಿನ ಮಾತ್ರ ಬಡಾವಣೆಗಳಿಗೆ ನೀರು ಸರಬರಾಜು ಮಾಡುತ್ತಿದ್ದು, ಉಳಿದ ದಿನಗಳು ಕುಡಿಯುವ ನೀರಿಗೆ ಖಾಸಗಿ ಟ್ಯಾಂಕರ್ ಮೊರೆ ಹೋಗಬೇಕಾದ ಪರಿಸ್ಥಿತಿ ಸಾರ್ವಜನಿಕರದ್ದಾಗಿದೆ.
ನಗರದ ಹಲವು ಬಡಾವಣೆಗಳಲ್ಲಿ ಅಳವಡಿಸಿರುವ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿತ ಕಂಡಿದ್ದು, ದಿನನಿತ್ಯದ ಬಳಕೆಗೆ ನೀರಿನ ತೀವ್ರ ಕೊರತೆಯುಂಟಾಗಿದೆ.
ಇನ್ನು ಹೊಸದಾಗಿ ಕೊಳವೆ ಬಾವಿಗೆ 500 ಅಡಿ ಕೊರೆದರೂ ನೀರು ಲಭ್ಯವಾಗುತ್ತಿಲ್ಲ ಎಂದು ನೊಂದು ನುಡಿಯುತ್ತಾರೆ ಇಲ್ಲಿನ ನಾಗರಿಕರು.
ಇನ್ನು ಗ್ರಾಮೀಣ ಭಾಗದಲ್ಲಿಯೂ ಇದೇ ಪರಿಸ್ಥಿತಿ ಮುಂದುವರೆದಿದೆ. ಕೊಳವೆ ಬಾವಿಯಲ್ಲಿ ನೀರು ಲಭ್ಯವಾಗುತ್ತಿಲ್ಲ. ಕಳೆದ ಎರಡು ವರ್ಷಗಳಲ್ಲಿ 500 ಹಾಗೂ 700 ಅಡಿಗಳಲ್ಲಿ ದೊರೆಯುತ್ತಿದ್ದ ನೀರು ಇಂದು ಸಾವಿರಾರು ಅಡಿ ಕೊರೆದರೂ ಸಿಗದೆ ರೈತರು ಕಂಗಾಲಾಗಿದ್ದಾರೆ.ಇನ್ನು ಹೇಮಾವತಿ ನಾಲೆಗಳಲ್ಲಿಯೂ ನೀರಿನ ಹರಿವನ್ನು ನಿಲ್ಲಿಸಲಾಗಿದ್ದು ಬೇಸಿಗೆ ಬೆಳೆಯಲ್ಲಿಯೂ ಹೆಚ್ಚು ವ್ಯತ್ಯಾಸವಾಗಲಿದೆ. ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ನೀರಿನ ಅವಶ್ಯಕತೆ ಹೆಚ್ಚಿದೆ.
ಜೂನ್ವರೆಗೂ ಸಾಕಾಗಲಿದೆ: ಗೊರೂರು ಹೇಮಾವತಿ ಜಲಾಶಯದಲ್ಲಿ ಮುಂದಿನ ಮೇವರೆಗೂ ಹಾಸನ ನಗರಕ್ಕೆ ಕುಡಿಯುವ ನೀರು ಪೂರೈಸಲು ಸಾಕಷ್ಟು ನೀರಿನ ಲಭ್ಯತೆ ಇದೆ ಎಂದು ಗೊರೂರು ಜಲಾಶಯದ ಎಂಜಿನಿಯರ್ ವೆಂಕಟರಮಣಪ್ಪ ತಿಳಿಸಿದ್ದಾರೆ.
ಜಲಾಶಯದಲ್ಲಿ 6.05 ಟಿಎಂಸಿ ನೀರಿನ ಸಂಗ್ರಹವಿದ್ದು ಇದರಲ್ಲಿ 2.6 ಟಿಎಂಸಿ ನೀರನ್ನು ಕುಡಿಯುವ ನೀರಿಗೆ ಬಳಸಿಕೊಳ್ಳಬಹುದಾಗಿದೆ.ಬೇಸಿಗೆ ಮುಗಿಯುವವರೆಗೆ ಯಾವುದೇ ತೊಂದರೆಯಾಗದು ಎಂದು ಸ್ಪಷ್ಟಪಡಿಸಿದ್ದಾರೆ.