ಎಲ್ಲಾ ಪಕ್ಷಗಳಿಂದ ಆಂತರಿಕ ಸಮೀಕ್ಷೆ

ಬೆಂಗಳೂರು,ಮಾ.20-ಲೋಕಸಭಾ ಚುನಾವಣೆ ಹಿನ್ನೆಲೆ ಎಲ್ಲ ಪಕ್ಷಗಳು ಬಿರುಸಿನ ಚುನಾವಣಾ ಕಾರ್ಯತಂತ್ರಗಳನ್ನು ಹೆಣೆದಿದ್ದು, ಆಂತರಿಕ ಸಮೀಕ್ಷೆ ಮಾಡುವ ಮೂಲಕ ಚುನಾವಣಾ ಬಲಾಬಲದ ಲೆಕ್ಕಾಚಾರ ನಡೆಸುತ್ತಿವೆ. ಇತ್ತ ಆರ್‍ಎಸ್‍ಎಸ್ ಕೂಡ ಆಂತರಿಕ ಸಮೀಕ್ಷೆ ನಡೆಸಿದ್ದು, ಗೆಲುವು ಸೋಲಿನ ಲೆಕ್ಕಾಚಾರ ಹಾಕಿದೆ.

ರಾಜ್ಯ ಬಿಜೆಪಿ ಈಗಾಗಲೇ ಲೋಕಸಮರಕ್ಕೆ ಸಕಲ ಸಿದ್ಧತೆಗಳನ್ನು ಮಾಡುತ್ತಿದೆ. ಬಿಜೆಪಿ ಒಂದೆಡೆ ಲೋಕಸಭಾ ಚುನಾವಣೆಗೆ ಗ್ರೌಂಡ್ ವರ್ಕ್ ಶುರು ಮಾಡಿದ್ದರೆ, ಆರ್‍ಎಸ್‍ಎಸ್ ಕೂಡ ಸೈಲೆಂಟಾಗಿ ಪ್ರತಿ ಕ್ಷೇತ್ರಗಳಲ್ಲಿ ತನ್ನದೇ ಆದ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಆರ್‍ಎಸ್‍ಎಸ್ ಕಾರ್ಯಕರ್ತರ ಮೂಲಕ ಕ್ಷೇತ್ರದ ನೈಜ ಚಿತ್ರಣವನ್ನು ಕಲೆ ಹಾಕುತ್ತಿದೆ.

ಈ ನಿಟ್ಟಿನಲ್ಲಿ ಆರ್‍ಎಸ್‍ಎಸ್ ತನ್ನ ವಿಸ್ತಾರಕ ಮಂಡಲ ಕಾರ್ಯಕರ್ತರ ಮೂಲಕ ಸದ್ಯದ ರಾಜ್ಯ ರಾಜಕೀಯ ಸ್ಥಿತಿಗತಿ ಬಗ್ಗೆ ಪ್ರಾಥಮಿಕ ಸಮೀಕ್ಷೆ ನಡೆಸಿದೆ.

ಸಮೀಕ್ಷೆ ಏನು ಹೇಳುತ್ತಿದೆ?:
ಆರ್‍ಎಸ್‍ಎಸ್ ತನ್ನ ಕಾರ್ಯಕರ್ತರ ಮೂಲಕ ರಾಜ್ಯದಲ್ಲಿನ ರಾಜಕೀಯ ಚಿತ್ರಣದ ಬಗ್ಗೆ ಪ್ರತಿ ಕ್ಷೇತ್ರಗಳಲ್ಲಿ ಆಂತರಿಕ ಸಮೀಕ್ಷೆ ನಡೆಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಸುಮಾರು 16-17 ಸೀಟುಗಳು ಬರಬಹುದು ಎಂದು ಸಮೀಕ್ಷೆ ಹೇಳುತ್ತಿದೆ.

ಮೈತ್ರಿ ಗೊಂದಲ, ಉಗ್ರರ ಮೇಲಿನ ವಾಯು ದಾಳಿ, ಮೋದಿ ಅಲೆ ಈ ಎಲ್ಲಾ ಅಂಶಗಳಿಂದ ಬಿಜೆಪಿ 16-17 ಸೀಟು ಗೆಲ್ಲುವ ವಾತಾವರಣ ಇದೆ ಎಂಬ ಅಂಶ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.

ಕಳೆದ ಒಂದು ತಿಂಗಳಿಂದೀಚೆಗೆ ಈ ಪ್ರಾಥಮಿಕ ಸಮೀಕ್ಷೆಯನ್ನು ನಡೆಸಲಾಗಿದ್ದು, ಆರ್‍ಎಸ್‍ಎಸ್ ವಿಸ್ತಾರಕ ಮಂಡಲ ಕಾರ್ಯಕರ್ತರು 28 ಕ್ಷೇತ್ರದಲ್ಲೂ ಸಮೀಕ್ಷೆ ನಡೆಸಿ ವಾಸ್ತವ ಸ್ಥಿತಿಗತಿಯನ್ನು ಅವಲೋಕಿಸಿದ್ದಾರೆ.

ಆರ್‍ಎಸ್‍ಎಸ್ ಕ್ಷೇತ್ರೀಯ ಸಹ ಪ್ರಚಾರಕರಾದ ಸುಧೀರ್, ಅಖಿಲ ಭಾರತೀಯ ಸಹ ಕಾರ್ಯದರ್ಶಿ ಮುಕುಂದ್ ಮುಂದಾಳತ್ವದಲ್ಲಿ ಈ ಸಮೀಕ್ಷೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಮೀಕ್ಷೆ ಪ್ರಕಾರ ಕರಾವಳಿ ಕರ್ನಾಟಕ, ಮುಂಬೈ ಕರ್ನಾಟಕ, ಬೆಂಗಳೂರಿನಲ್ಲಿ ಬಿಜೆಪಿ ತನ್ನ ಸ್ಥಾನಗಳನ್ನು ಕಾಯ್ದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಮೋದಿ ಎಂಟ್ರಿ ಬಳಿಕ ಏರಿಕೆ ಸಾಧ್ಯತೆ:
ಇನ್ನು ಪ್ರಧಾನಿ ಮೋದಿ ಪ್ರಚಾರದ ಬಳಿಕ ಗೆಲ್ಲುವ ಸ್ಥಾನಗಳು ಇನ್ನಷ್ಟು ಹೆಚ್ಚುವ ನಿರೀಕ್ಷೆಯನ್ನೂ ಹೊಂದಲಾಗಿದೆ.ಮೋದಿ ರಾಜ್ಯಾದ್ಯಂತ ಪ್ರಚಾರ ನಡೆಸಿದ ಬಳಿಕ ಬಿಜೆಪಿ ಸುಮಾರು 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂಬ ನಿರೀಕ್ಷೆ ಸಮೀಕ್ಷೆಯಲ್ಲಿ ವ್ಯಕ್ತವಾಗಿವೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ